ಬೆಂಗಳೂರಿನ ವಿವೇಕನಗರದ ಹಾಕಿ ಕ್ಲಬ್ ಕಿಚನ್ ನಲ್ಲಿ ಪರಿಶೀಲನೆ  
ರಾಜ್ಯ

ಬೆಂಗಳೂರು: ಹಾಕಿ ಕ್ಲಬ್ ಕಿಚನ್ ಮೇಲೆ ಆಹಾರ ಸುರಕ್ಷತೆ ಇಲಾಖೆ ಸಿಬ್ಬಂದಿ ದಾಳಿ: ತೀವ್ರ ಸ್ವಚ್ಛತಾ ಲೋಪ ಪತ್ತೆ; Video

ಅವಧಿ ಮೀರಿದ ಹಲವು ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ಹಾಗೂ ಸೂಕ್ತ ಲೇಬಲ್ ಇಲ್ಲದೆ ಪ್ಯಾಕ್ ಮಾಡಲಾಗಿದ್ದ ವಸ್ತುಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ವಿವೇಕನಗರ ಹಾಕಿ ಕ್ಲಬ್‌ನಲ್ಲಿ ದಿಢೀರ್ ತಪಾಸಣೆ ನಡೆಸಿದ್ದು, ಅಡುಗೆಮನೆಯಲ್ಲಿ ತೀವ್ರ ಸ್ವಚ್ಛತಾ ಲೋಪ, ಕೀಟಗಳ ಹಾವಳಿ ಹಾಗೂ ಅವಧಿ ಮೀರಿದ ಪಾನೀಯಗಳ ಮಾರಾಟ ನಡೆಯುತ್ತಿರುವುದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (FSSA), 2006 ಹಾಗೂ ಪರವಾನಗಿ ಮತ್ತು ನೋಂದಣಿ ನಿಯಮಾವಳಿ, 2011ರ ಅಡಿಯಲ್ಲಿ ಈ ತಪಾಸಣೆ ನಡೆಸಲಾಗಿದೆ. ಈ ಪ್ರದೇಶ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಗೆ ಒಳಪಡುತ್ತದೆ.

ದಾಳಿ ವೇಳೆ ಕ್ಲಬ್‌ನ ಅಡುಗೆಮನೆಯು ಅತ್ಯಂತ ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅವಧಿ ಮೀರಿದ ಹಲವು ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ಹಾಗೂ ಸೂಕ್ತ ಲೇಬಲ್ ಇಲ್ಲದೆ ಪ್ಯಾಕ್ ಮಾಡಲಾಗಿದ್ದ ವಸ್ತುಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ.

ಪತ್ತೆಯಾದ ಪ್ರಮುಖ ಲೋಪಗಳು

1. ಅವಧಿ ಮೀರಿದ ಉತ್ಪನ್ನಗಳು:
ಅವಧಿ ಮೀರಿದ 40 ಬಾಟಲಿ ತಂಪು ಪಾನೀಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೋಡಾ ಬಾಟಲಿಗಳಲ್ಲಿ ಸಮರ್ಪಕ ಲೇಬಲ್ ಇಲ್ಲದಿರುವುದೂ ಪತ್ತೆಯಾಗಿದ್ದು, ಇದು FSSAI ನಿಯಮಗಳ ಉಲ್ಲಂಘನೆಯಾಗಿದೆ.

2. ಸ್ವಚ್ಛತಾ ಲೋಪ:
ಆಹಾರ ತಯಾರಿಸುವ ಹಾಗೂ ಸಂಗ್ರಹಿಸುವ ಸ್ಥಳಗಳನ್ನು ಸರಿಯಾಗಿ ನಿರ್ವಹಿಸದೆ, ಸುತ್ತಮುತ್ತಲಿನ ಪರಿಸರವೂ ಅಸ್ವಚ್ಛವಾಗಿರುವುದು ಕಂಡುಬಂದಿದೆ.

3. ಸುರಕ್ಷತಾ ನಿಯಮಗಳ ಉಲ್ಲಂಘನೆ:
ಆಹಾರ ನಿರ್ವಹಣೆ, ಸಂರಕ್ಷಣೆ ಹಾಗೂ ಸಂಗ್ರಹಣೆಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸದಿರುವುದು ಪತ್ತೆಯಾಗಿದೆ.

4. ಕೀಟಗಳ ಹಾವಳಿ:
ಆಹಾರ ತಯಾರಿಕೆ ನಡೆಯುವ ಸ್ಥಳಗಳಲ್ಲೇ ಗಣನೀಯ ಪ್ರಮಾಣದಲ್ಲಿ ಕೀಟಗಳ ಹಾವಳಿ ಕಂಡುಬಂದಿದ್ದು, ಇದರಿಂದ ಆಹಾರ ಕಲುಷಿತಗೊಳ್ಳುವ ನೇರ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪಾಸಣೆಯಲ್ಲಿ ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಂಬಂಧಪಟ್ಟ ಆಹಾರ ಉದ್ಯಮ ನಿರ್ವಾಹಕರಿಗೆ (FBO) ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಹಿಂದೂ ದೇವತೆಗಳಿಗೆ ಅಪಮಾನ: ನಿಶು ಆಜಾದ್ ವಿರುದ್ಧ ದೂರು ದಾಖಲಿಸಿದ ಸುಪ್ರೀಂ ಕೋರ್ಟ್ ವಕೀಲ!

ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ ಮೈಗಳ್ಳ!

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ; ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?

ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಸ್ವಾಮೀಜಿಗಳ ಕೈಯಿಂದ ಜಾರಿದ ಶ್ರೀಕೃಷ್ಣನ ಉತ್ಸವ ಮೂರ್ತಿ, ಭಕ್ತರಲ್ಲಿ ಹೆಚ್ಚಿದ ಆತಂಕ!