ಬೆಂಗಳೂರು: 2027ರ ಪವಿತ್ರ ಹಜ್ ಯಾತ್ರೆಗೆ ಆಯ್ಕೆಯಾಗಿರುವ ಕರ್ನಾಟಕದ ಎಲ್ಲಾ ಯಾತ್ರಿಕರಿಗೆ ಎರಡು ಹಂತದ ವೈದ್ಯಕೀಯ ತಪಾಸಣೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯುವುದನ್ನು ರಾಜ್ಯ ಆರೋಗ್ಯ ಇಲಾಖೆಯು ಕಡ್ಡಾಯಗೊಳಿಸಿದೆ. ಯಾತ್ರಾರ್ಥಿಗಳ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವೈದ್ಯಕೀಯ ಮೌಲ್ಯಮಾಪನದ ಮೊದಲ ಹಂತವಾಗಿರುವ ಪ್ರಾಥಮಿಕ ವೈದ್ಯಕೀಯ ತಪಾಸಣೆಯನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ, ಅಲೋಪಥಿ ವೈದ್ಯಾಧಿಕಾರಿಗಳು ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಶ್ರೀ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಗಳಲ್ಲೂ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
ಯಾತ್ರಾರ್ಥಿಗಳು ಪ್ರಾಥಮಿಕ ವೈದ್ಯಕೀಯ ತಪಾಸಣೆ ಹಾಗೂ ಫಿಟ್ನೆಸ್ ಪ್ರಮಾಣಪತ್ರವನ್ನು ಪಾವತಿ ಚಲನ್ ಅಥವಾ ಆನ್‌ಲೈನ್ ರಸೀದಿಯೊಂದಿಗೆ ಹಜ್ ಸಮಿತಿ ಆಫ್ ಇಂಡಿಯಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ದಾಖಲೆಗಳ ಭೌತಿಕ ಪ್ರತಿಗಳನ್ನು 2026ರ ಸೆಪ್ಟೆಂಬರ್ 15ರೊಳಗೆ ಬೆಂಗಳೂರಿನ ರಾಜ್ಯ ಹಜ್ ಸಮಿತಿ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಯಾತ್ರಾರ್ಥಿಗಳು ಮೂಲ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಎಲ್ಲಾ ವೈದ್ಯಕೀಯ ತಪಾಸಣಾ ವರದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಯಾತ್ರೆಯ ದಿನಾಂಕ ಸಮೀಪಿಸಿದಾಗ ನಡೆಯುವ ಎರಡನೇ ಹಂತದ ವೈದ್ಯಕೀಯ ತಪಾಸಣೆ ಮತ್ತು ಲಸಿಕೆ ನೀಡುವ ಪ್ರಕ್ರಿಯೆ ವೇಳೆ ಈ ದಾಖಲೆಗಳು ಅಗತ್ಯವಾಗಲಿವೆ.
ವೈದ್ಯಕೀಯ ತಪಾಸಣೆ ಪ್ರಕ್ರಿಯೆಯ ಸಮನ್ವಯಕ್ಕಾಗಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ತಪಾಸಣಾ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.
ನಿಗದಿತ ಅವಧಿಯೊಳಗೆ ತಪಾಸಣೆ ಹಾಗೂ ದಾಖಲೆಗಳ ಪ್ರಕ್ರಿಯೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಕಾಲೇಜುಗಳ ಶಸ್ತ್ರಚಿಕಿತ್ಸಕರು ಹಾಗೂ ಡೀನ್-ಕಮ್-ನಿರ್ದೇಶಕರು ಅಗತ್ಯ ಸಹಕಾರ ನೀಡಲಿದ್ದಾರೆ.