ಬಸ್'ಗೆ ಬೆಂಕಿ ಹೊತ್ತಿಕೊಂಡಿರುವುದು. 
ರಾಜ್ಯ

ಮೈಸೂರು: ಹೈವೇಯಲ್ಲಿ ಧಗಧಗನೆ ಉರಿದ KSRTC ‘ಪವರ್ ಪ್ಲಸ್’ ಎಲೆಕ್ಟ್ರಿಕ್ ಬಸ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಮಹಾ ದುರಂತ!

ಚಾಲನೆ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಬಸ್‌ನ ಬ್ರೇಕ್ ಜಾಮ್ ಆಗಿದೆ. ಇದರಿಂದಾಗಿ ಚಕ್ರಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ತಕ್ಷಣವೇ ಹಿಂಭಾಗದ ಚಕ್ರದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.

ಮೈಸೂರು: ಕೊಡಗಿನ ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) 'ಇವಿ ಪವರ್ ಪ್ಲಸ್' (EV Power Plus) ಎಸಿ ಸ್ಲೀಪರ್ ಎಲೆಕ್ಟ್ರಿಕ್ ಬಸ್ ಶನಿವಾರ ಸಂಜೆ ಮೈಸೂರು ಬಳಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ ಎಲ್ಲಾ 18 ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಕೇಂದ್ರ ಘಟಕಕ್ಕೆ (BCD-4) ಸೇರಿದ ಈ ಎಲೆಕ್ಟ್ರಿಕ್ ಬಸ್ ಶನಿವಾರ ಸಂಜೆ 5:40 ರ ಸುಮಾರಿಗೆ ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಬಳಿ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಚಾಲನೆ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡು ಬಸ್‌ನ ಬ್ರೇಕ್ ಜಾಮ್ ಆಗಿದೆ. ಇದರಿಂದಾಗಿ ಚಕ್ರಗಳ ನಡುವೆ ತೀವ್ರ ಘರ್ಷಣೆ ಉಂಟಾಗಿ, ತಕ್ಷಣವೇ ಹಿಂಭಾಗದ ಚಕ್ರದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.

ಚಕ್ರದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಅಲರ್ಟ್ ಆದ ಬಸ್ ಚಾಲಕ, ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬೆಂಕಿ ಇಡೀ ಬಸ್‌ಗೆ ಆವರಿಸುವ ಮುನ್ನವೇ ಚುರುಕಾಗಿ ಕಾರ್ಯಪ್ರವೃತ್ತರಾದ ಚಾಲಕ ಮತ್ತು ನಿರ್ವಾಹಕರು, ಗಾಢ ನಿದ್ರೆಯಲ್ಲಿದ್ದ ಹಾಗೂ ವಿಶ್ರಾಂತಿ ಪಡೆಯುತ್ತಿದ್ದ ಎಲ್ಲಾ 18 ಪ್ರಯಾಣಿಕರನ್ನು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಬಸ್‌ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ಗಳ ಮೂಲಕ ಆರಂಭದಲ್ಲೇ ಬೆಂಕಿ ನಂದಿಸಲು ಸಿಬ್ಬಂದಿ ಪ್ರಯತ್ನಿಸಿದರಾದರೂ, ಇವಿ ಬಸ್‌ನ ಬ್ಯಾಟರಿ ಮತ್ತು ಇಂಟೀರಿಯರ್ ವಸ್ತುಗಳ ಕಾರಣದಿಂದಾಗಿ ಬೆಂಕಿ ಅತ್ಯಂತ ವೇಗವಾಗಿ ಇಡೀ ಬಸ್‌ಗೆ ಆವರಿಸಿದೆ.

ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ.

ಈ ಅವಘಡದಿಂದಾಗಿ ಹೈವೇಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ರಸ್ತೆಯಲ್ಲೇ ಉಳಿದಿದ್ದ ಪ್ರಯಾಣಿಕರಿಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ತಕ್ಷಣವೇ ಬೇರೆ ಪರ್ಯಾಯ ಬಸ್‌ಗಳ ವ್ಯವಸ್ಥೆ ಮಾಡಿ, ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಎಸ್.ಆರ್.ಟಿ.ಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಈ ನಡುವೆ ಕೆಎಸ್‌ಆರ್‌ಟಿಸಿ ಗ್ರಾಮೀಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ಟಿ. ವೀರೇಶ್, ಬಿಳಿಕೆರೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಟಿ.ಎಂ. ಪುನೀತ್, ಉಪನಿರೀಕ್ಷಕ ನವೀನ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಜಾರ್ಖಂಡ್: ಸಚಿವ ಸುದಿವ್ಯ ಸೋನು ಹೃದಯಾಘಾತದಿಂದ ನಿಧನ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ