ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ದಿನಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದರೂ, ಜಾಲದ ಸುಮಾರು 20 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ ಎನ್ನಲಾಗಿದೆ. ಬಿಎಂಆರ್‌ಸಿಎಲ್ ಮತ್ತು ಸಿಎಜಿಯ ಇತ್ತೀಚಿನ ವರದಿಗಳ ಪ್ರಕಾರ, ಹಳದಿ, ಹಸಿರು ಹಾಗೂ ನೇರಳೆ ಮಾರ್ಗಗಳಲ್ಲಿರುವ ನಿಲ್ದಾಣಗಳಲ್ಲಿ ದಿನದ ಒಟ್ಟು ಪ್ರಯಾಣಿಕರ ಸಂಖ್ಯೆ 2,000 ಕ್ಕಿಂತಲೂ ಕಡಿಮೆ ಇದೆ. ಆ ಕುರಿತ ವರದಿ ಇಲ್ಲಿದೆ:
ಯಾವ ಮಾರ್ಗದ, ಯಾವ ನಿಲ್ದಾಣದಲ್ಲಿ ಕಮ್ಮಿ ಪ್ರಯಾಣಿಕರು?
ಹಳದಿ ಮಾರ್ಗ: ನಮ್ಮ ಮೆಟ್ರೊದ ಹೊಸ ಮಾರ್ಗವಾಗಿರುವ ಹಳದಿ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಅದರಂತೆ, ಅಗ್ರಹಾರದಲ್ಲಿ ಪ್ರತಿದಿನ 1,243 ಮಂದಿ ಪ್ರಯಾಣಿಸುತ್ತಿದ್ದರೆ, ಸಿಂಗಸಂದ್ರದಲ್ಲಿ 2,539, ಹೆಬ್ಬಗೋಡಿಯಲ್ಲಿ 2,739 ಹಾಗೂ ಹುಸ್ಕೂರು ರಸ್ತೆಯಲ್ಲಿ 3,169 ಮಂದಿ ಸಂಚರಿಸುತ್ತಿದ್ದಾರೆ. ರಾಗಿ ಗುಡ್ಡದಲ್ಲಿ 4,652, ಹೊಸ ರಸ್ತೆಯಲ್ಲಿ 5,324, ಹೊಂಗಸಂದ್ರದಲ್ಲಿ 5,378, ಎಲೆಕ್ಟ್ರಾನಿಕ್ ಸಿಟಿಯಲ್ಲಿ 5,546 ಹಾಗೂ ಕೂಡ್ಲು ಗೇಟ್‌ನಲ್ಲಿ 5,615 ಮಂದಿ ಪ್ರತಿದಿನ ಮೆಟ್ರೋ ಸೇವೆ ಬಳಸುತ್ತಿದ್ದಾರೆ.
ಹಸಿರು ಮಾರ್ಗ: ಹಸಿರು ಮಾರ್ಗದಲ್ಲಿಯೂ 7 ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರಂತೆ, ಮಂಜುನಾಥನಗರದಲ್ಲಿ 1,411 ಜನರು ಸಂಚರಿಸುತ್ತಿದ್ದರೆ, ಪೀಣ್ಯ ಇಂಡಸ್ಟ್ರಿಯಲ್ಲಿ 2,676, ತಲಘಟ್ಟಪುರದಲ್ಲಿ 3,349 ಹಾಗೂ ಚಿಕ್ಕಬಿದರಕಲ್ಲಿನಲ್ಲಿ 4,519 ಮಂದಿ ಪ್ರಯಾಣಿಸುತ್ತಿದ್ದಾರೆ. ಜೊತೆಗೆ, ಪೀಣ್ಯ ನಿಲ್ದಾಣದಲ್ಲಿ 4,956, ದೊಡ್ಡಕಲ್ಲ ಸಂದ್ರದಲ್ಲಿ 5,827 ಹಾಗೂ ಮಹಾಕವಿ ಕುವೆಂಪು ರಸ್ತೆಯಲ್ಲಿ 5,869 ಜನರು ಪ್ರತಿದಿನ ಮೆಟ್ರೋ ಸೇವೆ ಪಡೆಯುತ್ತಿದ್ದಾರೆ.
ನೇರಳೆ ಮಾರ್ಗ: ನೇರಳೆ ಮಾರ್ಗದ 4 ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅದರಂತೆ, ನಾಯಂಡ ಹಳ್ಳಿ ನಿಲ್ದಾಣದಲ್ಲಿ ಪ್ರತಿದಿನ 2,645 ಜನರು, ಹೋಪ್ ಫಾರ್ಮ್‌ನಲ್ಲಿ 3,192, ದೀಪಾಂಜಲಿ ನಗರದಲ್ಲಿ 4,610 ಹಾಗೂ ಜಾನಭಾರತಿ ಮೆಟ್ರೋ ನಿಲ್ದಾಣದಲ್ಲಿ 5,218 ಮಂದಿ ಪ್ರಯಾಣಿಸುತ್ತಿದ್ದಾರೆ.
ಹಾಗಾದ್ರೆ, ಪ್ರಯಾಣಿಕರು ಬಾರದೇ ಇರಲು ಪ್ರಮುಖ ಕಾರಣಗಳೇನು?
ಮೆಟ್ರೋ ನಿಲ್ದಾಣದಿಂದ ಸುತ್ತಮುತ್ತಲಿನ ಐಟಿ ಪಾರ್ಕ್‌ಗಳು ಅಥವಾ ವಸತಿ ಪ್ರದೇಶಗಳಿಗೆ ತೆರಳಲು ಬಿಎಂಟಿಸಿ ಫೀಡರ್ ಬಸ್‌ಗಳ ಕೊರತೆ ಎದ್ದು ಕಾಣುತ್ತಿದೆ. ಇದರೊಂದಿಗೆ, ಕೇವಲ 1-2 ಕಿಲೋಮೀಟರ್ ದೂರ ಕ್ರಮಿಸಲು ಆಟೋ ಚಾಲಕರು ದುಬಾರಿ ಬಾಡಿಗೆ ಕೇಳುವುದರಿಂದ, ಪ್ರಯಾಣಿಕರು ಮೆಟ್ರೋ ಬಳಸುವ ಬದಲು ಸ್ವಂತ ವಾಹನಗಳನ್ನೇ ಆಶ್ರಯಿಸುತ್ತಿದ್ದಾರೆ. ಜೊತೆಗೆ ಕೆಲವು ನಿಲ್ದಾಣಗಳನ್ನು ವಸತಿ ಅಥವಾ ವಾಣಿಜ್ಯ ಸಾಂದ್ರತೆ ಇಲ್ಲದ ಅತ್ಯಂತ ಬಿಗುವಿನ ಅಥವಾ ದೂರದ ಜಾಗಗಳಲ್ಲಿ ನಿರ್ಮಿಸಲಾಗಿದೆ. ಸುತ್ತಮುತ್ತಲಿನ ಪ್ರಮುಖ ವಾಣಿಜ್ಯ ಕೇಂದ್ರಗಳೊಂದಿಗೆ ಇವು ನೇರ ಸಂಪರ್ಕ ಹೊಂದಿಲ್ಲ.
ಏತನ್ಮಧ್ಯೆ, ಹಸಿರು ಮಾರ್ಗದದಲ್ಲಿ ಕಡಿಮೆ ಪ್ರಯಾಣಿಕರು ಸಂಚರಿಸುವ ನಾಗಸಂದ್ರ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಜಾಲಹಳ್ಳಿ ಮತ್ತು ದಾಸರಹಳ್ಳಿಯಂತಹ ನಿಲ್ದಾಣಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿವೆ. ಈ ನಿಲ್ದಾಣಗಳನ್ನು ತಲುಪಲು ಸೂಕ್ತ ಪಾದಚಾರಿ ಮೇಲ್ಸೇತುವೆಗಳು ಅಥವಾ ಅಂಡರ್‌ಪಾಸ್‌ಗಳು ಇಲ್ಲದಿರುವುದರಿಂದ ರಸ್ತೆ ದಾಟುವುದು ಪಾದಚಾರಿಗಳಿಗೆ ದೊಡ್ಡ ಸಾಹಸವಾಗಿದೆ.
ಒಟ್ಟಾರೆಯಾಗಿ ಚಿಕ್ಕಪೇಟೆ, ಮೆಜೆಸ್ಟಿಕ್, ಇಂದಿರಾನಗರ ಎಂ.ಜಿ. ರಸ್ತೆ, ಕಬ್ಬನ್ ಪಾರ್ಕ್ ವೈಟ್‌ಫೀಲ್ಡ್, ಯಶವಂತಪುರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಪಟ್ಟಂದೂರು ಅಗ್ರಹಾರ ಮತ್ತು ಕೆ.ಆರ್. ಪುರಂ ನಿಲ್ದಾಣಗಳು ಲಕ್ಷಾಂತರ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೆ, ಈ 20 ನಿಲ್ದಾಣಗಳು ಮಾತ್ರ ಮೂಲಸೌಕರ್ಯಗಳ ಕೊರತೆಯಿಂದಾಗಿ ಜನರಿಲ್ಲದೆ ಖಾಲಿ ಹೊಡೆಯುತ್ತಿವೆ