ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರ್ಕಾರ ಅಧಿಕಾರಕ್ಕೆ ಬಂದು ನಾಳೆ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಬಡವರಿಗೆ ಭರ್ಜರಿ ಯೋಜನೆಗಳನ್ನು ಘೋಷಿಸಲು ಮುಂದಾಗಿದೆ.
ಪ್ರತಿ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ 50 ಸಾವಿರ ಉಚಿತ ನಿವೇಶನ ಹಂಚಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಒಟ್ಟು 15 ಲಕ್ಷ ನಿವೇಶನ ಹಂಚಿಕೆಯ ಗುರಿ ಹೊಂದಲಾಗಿದ್ದು, ಒಟ್ಟು 3 ಹಂತದಲ್ಲಿ ನಿವೇಶನಗಳನ್ನ ಹಂಚಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದ 5 ಲಕ್ಷ ನಿವೇಶನ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ನಾಳೆ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ವೇಳೆ, ಸುಮಾರು 80 ಜನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂವಾದ ನಡೆಸಲಿದ್ದಾರೆ.
ಇದೇ ವೇಳೆ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಕೆಲವು ಆದ್ಯತೆಯ ಕ್ಷೇತ್ರಗಳಿಗೆ ನಾಲ್ಕೈದು ಭರ್ಜರಿ ಹೊಸ ಘೋಷಣೆ ಮಾಡುವ ನಿರೀಕ್ಷೆ ಇದೆ.