ಬೆಂಗಳೂರು: ಖ್ಯಾತಿ ವ್ಯಕ್ತಿಯ ನಡವಳಿಕೆಗೆ ವಿನಾಯಿತಿ ನೀಡುವುದಿಲ್ಲ; ಬದಲಿಗೆ ಆ ನಡವಳಿಕೆಯ ಮಾನದಂಡವನ್ನು ಮತ್ತಷ್ಟು ಎತ್ತರಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಜಯ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ. ಇದೇ ವೇಳೆ ನಾಗರತ್ನ ಅವರಿಗೆ ಕಾಯಂ ಪರಿಹಾರವಾಗಿ ರೂ.2 ಕೋಟಿ ಜೀವನಾಂಶ (Alimony) ನೀಡುವಂತೆ ನಟನಿಗೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಈ ಹಿಂದೆ ದುನಿಯಾ ವಿಜಯ್ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ವಿಚ್ಛೇದನ ನೀಡಿದೆ.
ವಿಜಯ್ ಅವರು ಪ್ರಸ್ತುತ ನಾಗರತ್ನ ವಾಸಿಸುತ್ತಿರುವ ಮನೆಯನ್ನು ಅವರ ಹೆಸರಿಗೆ ವರ್ಗಾಯಿಸಿರುವುದನ್ನು ಪರಿಗಣಿಸಿದ ನ್ಯಾಯಾಲಯ, ವಿಜಯ್ ಅವರ ಆರ್ಥಿಕ ಸಾಮರ್ಥ್ಯ ಹಾಗೂ ಪತ್ನಿ ಮತ್ತು ಮೂವರು ಮಕ್ಕಳ ಆರ್ಥಿಕ ಭದ್ರತೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಒಮ್ಮೆಗೆ ರೂ.2 ಕೋಟಿ ಜೀವನಾಂಶ ನೀಡುವಂತೆ ಆದೇಶಿಸಿದೆ.
ಈ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. ವಿಫಲವಾದಲ್ಲಿ, ವಿಚ್ಛೇದನದ ಡಿಕ್ರಿ ನೀಡಿದ ದಿನದಿಂದ ಪಾವತಿ ಮಾಡುವ ದಿನದವರೆಗೆ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸಿದೆ.
ಇದರೊಂದಿಗೆ ವಿಜಯ್ ಮತ್ತು ನಾಗರತ್ನ ನಡುವಿನ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೆರೆ ಎಳೆದಿದೆ.
ವಿಜಯ್ ಮತ್ತು ನಾಗರತ್ನ ಅವರಿಗೆ ಕ್ರಮವಾಗಿ 46 ಹಾಗೂ 40 ವರ್ಷ ವಯಸ್ಸಾಗಿದ್ದು, 1999ರ ಆಗಸ್ಟ್ 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಹರೋ ಗದ್ದೆಯಲ್ಲಿ ವಿವಾಹವಾಗಿದ್ದರು.
“ಸಾರ್ವಜನಿಕ ಪ್ರಭಾವ ಹೊಂದಿರುವ ವ್ಯಕ್ತಿಯೊಬ್ಬರು ವೈವಾಹಿಕ ಜೀವನದ ಪಾವಿತ್ರ್ಯದಿಂದ ದೂರ ಸರಿದಾಗ, ಅವರ ಪತನವು ಮೆಚ್ಚುಗೆಯ ಕಾರಣವಾಗುವುದಿಲ್ಲ. ಪತಿಯ ನಡವಳಿಕೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ತೀರ್ಪು ನೀಡಲಾಗಿಲ್ಲ. ಪ್ರಕರಣದ ವಿಶಿಷ್ಟ ವಾಸ್ತವಾಂಶಗಳನ್ನು ಪರಿಗಣಿಸಿ ತೀರ್ಪು ನೀಡಲಾಗಿದೆ.
ಪರದೆಯ ಮೇಲೆ ಗಳಿಸಿದ ಗೌರವವು ಮನೆಯಲ್ಲಿ ವೈವಾಹಿಕ ಕರ್ತವ್ಯಗಳ ನಿರ್ಲಕ್ಷ್ಯವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂಬುದನ್ನು ಇದು ನೆನಪಿಸುವಂತಿರಲಿ ಎಂದು ನಾವು ಆಶಿಸುತ್ತೇವೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಗರದ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯವು 2024ರ ಜೂನ್ 13ರಂದು ಹಿಂದೂ ವಿವಾಹ ಕಾಯ್ದೆ, 1955ರ ಅಡಿಯಲ್ಲಿ ವಿಜಯ್ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಅವರ ಮೇಲ್ಮನವಿಯನ್ನು ಅಂಗೀಕರಿಸಿ ವಿಚ್ಛೇದನ ಮಂಜೂರು ಮಾಡಿದೆ.
ಶಾಶ್ವತ ಜೀವನಾಂಶ ನಿಗದಿಪಡಿಸಲು ಇಬ್ಬರೂ ತಮ್ಮದೇ ಆದ ಆರ್ಥಿಕ ವಿವರಗಳನ್ನು ಸಲ್ಲಿಸಿರಲಿಲ್ಲ. ಆದಾಗ್ಯೂ, ವಿಜಯ್ ಚಲನಚಿತ್ರ ನಟರಾಗಿದ್ದು, ಅವರ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಮೂವರು ಮಕ್ಕಳು ಈಗಾಗಲೇ ಪ್ರಾಪ್ತ ವಯಸ್ಕರಾಗಿದ್ದರೂ, ಅವರ ಸಾಮಾನ್ಯ ಕಲ್ಯಾಣ, ಶಿಕ್ಷಣದ ಅಗತ್ಯಗಳು ಹಾಗೂ ಭವಿಷ್ಯದ ವಿವಾಹ ವೆಚ್ಚಗಳನ್ನು ಪರಿಗಣಿಸಿ ಆರ್ಥಿಕ ಭದ್ರತೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಪೋಷಕರ ನಡುವಿನ ಸುದೀರ್ಘ ಕಾನೂನು ಹೋರಾಟದ ಪರಿಣಾಮ ಮಕ್ಕಳ ಮೇಲೆ ಬೀರದಂತೆ ನೋಡಿಕೊಳ್ಳಬೇಕು ಎಂದೂ ಹೈಕೋರ್ಟ್ ತಿಳಿಸಿದೆ.