ಬೆಂಗಳೂರು: ದೇವಸ್ಥಾನ, ವಿಭೂತಿ, ನಾಮದಲ್ಲೇ ಡಿಕೆ ಶಿವಕುಮಾರ್ ಅವರ ನೂರು ದಿನ ಮುಗಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳಪೆಯ ನೂರು ದಿನ ಪೂರೈಸಿದೆ. ಆದರೆ ಜನರಿಗೆ ಸಿಕ್ಕಿದ್ದು ಕೇವಲ ಮೂರು ದಿನ. ಇದೊಂದು ಯುಟರ್ನ್ ಸರ್ಕಾರ. ನೂರು ದಿನವಾಗಿರುವುದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಟೀಕಿಸಿದರು.
ಇಡೀ ಸರ್ಕಾರದ ನೂರು ದಿನದ ಗೊಂದಲ ಗೂಡು ನಿವಾರಣೆಗೆ ಡಿಕೆಶಿ ಸತತ ದೆಹಲಿ ಯಾತ್ರೆ ಮಾಡಿದರು. ಜಾಹೀರಾತು, ಮಾಧ್ಯಮಗೋಷ್ಠಿಯಲ್ಲೇ ತೊಡಗಿದ್ದರು ಎಂದು ಹೇಳಿದರು.
ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ಮುಖ್ಯಮಂತ್ರಿಗಳು ಲಾಲ್‍ಬಾಗ್ ನುಂಗಲು, ಸ್ಯಾಂಕಿ ಟ್ಯಾಂಕ್ ನುಂಗಲು ಹಾಗೂ ಹೆಬ್ಬಾಳ ಕೆರೆ ಜಾಗ ನುಂಗಲು ಮುಂದಾಗಿದ್ದರು. ಬಿಡದಿ ಟೌನ್‍ಶಿಪ್‍ನಲ್ಲಿ ಒಂಬತ್ತು ಸಾವಿರ ಎಕರೆ, ಆನೇಕಲ್ ನಲ್ಲಿ ಕೆಐಎಡಿಬಿ ಹೆಸರಲ್ಲಿ ಮೂರು ಸಾವಿರ ಎಕರೆ ನುಂಗಲು ಮುಂದಾದರು. ಇವೇ ಅವರ ಸಾಧನೆಗಳು ಎಂದರು.
ರಾಜ್ಯದಲ್ಲಿ ಭೀಕರ ಬರವಿದೆ. ನಾಲ್ಕು ತಿಂಗಳಲ್ಲಿ ಒಬ್ಬರಿಗೂ ಬರ ಪರಿಹಾರ ನೀಡಲಿಲ್ಲ. ಈವರೆಗೆ ಬರಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2500 ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಮೌನ ವಹಿಸಿದರು. ಗುಂಡಿಗೆ ಜನ ಬಿದ್ದು ಸತ್ತರು. ಒಂದೊಂದು ಗುಂಡಿ ಮುಚ್ಚಲು ಒಂದು ಲಕ್ಷ ತಗೊಂಡಿದ್ದಾರೆ. ಅದರಲ್ಲೂ ಸಾವಿರಾರು ರೂಪಾಯಿ ಹೊಡೆದರು ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ 12 ಜನರು ಸತ್ತಿದ್ದಾರೆ. ಒಂದು ಗುಂಡಿ ಮುಚ್ಚಲು 1 ಲಕ್ಷ ರೂ. ಖರ್ಚು ಮಾಡಿದ್ದು, ಅದರಲ್ಲಿ 75% ಕಾಂಗ್ರೆಸ್ ನಾಯಕರ ಜೇಬಿಗೆ ಸೇರಿದೆ.
ಉದ್ಯಾನಗಳ 5% ಜಾಗವನ್ನು ರಿಯಲ್ ಎಸ್ಟೇಟ್‌ಗೆ ನೀಡಲು ಯೋಜಿಸಲಾಗಿತ್ತು. ಸರ್ಕಾರ ಉದ್ಯಮಿ ಗೌತಮ್ ಅದಾನಿಯನ್ನು ಕರೆಸಿ ಉದ್ಯಾನ ನೀಡಲು ಮುಂದಾಗಿತ್ತು. ನಂತರ ಜನರ ವಿರೋಧಕ್ಕೆ ಮಣಿದು ಯೂ-ಟರ್ನ್ ಮಾಡಲಾಯಿತು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಎಲ್ಲ ಕೋರ್ಟ್‌ಗಳಲ್ಲೂ ನೀರು ಹರಿಸಿ ಎಂದೇ ಆದೇಶ ಬಂದಿದೆ. ಎಲ್ಲ ಪರೀಕ್ಷೆಯಲ್ಲೂ ಸಿಎಂ ಅನುತ್ತೀರ್ಣರಾಗಿದ್ದಾರೆ. ಆದರೂ ಅಭಿವೃದ್ಧಿಗೆ ಬದ್ಧ ಎಂದು ಜಾಹೀರಾತು ನೀಡಿದ್ದಾರೆ ಎಂದು ಹೇಳಿದರು.