ಬೆಂಗಳೂರು: ವಿವಿಧ ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಅನಾಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೊರೇಟರಿ ಪ್ರೈವೇಟ್ ಲಿಮಿಟೆಡ್‌ಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳ ತಂಡದೊಂದಿಗೆ ಪ್ರಯೋಗಾಲಯಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿದರು.
ಈ ವೇಳೆ ಪ್ರಯೋಗಾಲಯಕ್ಕೆ ಕೆಎಸ್‌ಪಿಸಿಬಿಯಿಂದ 2025ರವರೆಗೆ ಮಾತ್ರ ಸ್ಥಾಪನಾ ಅನುಮತಿ ಇದ್ದು, ಆ ಬಳಿಕ ಮಾನ್ಯ ಅನುಮತಿ ಪಡೆಯದೇ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಇದೇ ವೇಳೆ ಪ್ರಯೋಗಾಲಯದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯೂ ಇಲ್ಲದಿರುವುದು ಕಂಡುಬಂದಿದೆ.
ಪ್ರಯೋಗಾಲಯದಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ತೆರೆದ ಗುಂಡಿಗೆ ಸುರಿಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಪ್ರಯೋಗಾಲಯದಲ್ಲಿ ಮೂವರು ವಿಶ್ಲೇಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಪರಿಶೀಲನೆ ವೇಳೆ ಕೇವಲ ಒಬ್ಬ ವಿಶ್ಲೇಷಕ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಕೊಳಚೆ ನೀರು ಸಂಸ್ಕರಣಾ ಘಟಕಗಳಿಂದ (ಎಸ್‌ಟಿಪಿ) ನೀರಿನ ಮಾದರಿಗಳ ವಿಶ್ಲೇಷಣೆಗೆ ವಿಧಿಸಲಾಗುತ್ತಿದ್ದ ಶುಲ್ಕ ಹಾಗೂ ಕಾರ್ಖಾನೆಗಳಿಂದ ವಾಯು ಮಾಲಿನ್ಯದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲು ವಿಧಿಸಲಾಗುತ್ತಿದ್ದ ಶುಲ್ಕದಲ್ಲೂ ವ್ಯತ್ಯಾಸಗಳು ಕಂಡುಬಂದಿವೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನಿಗದಿಪಡಿಸಿರುವ ದರಪಟ್ಟಿ ಹಾಗೂ ಮಾರ್ಗಸೂಚಿಗಳನ್ನು ಪ್ರಯೋಗಾಲಯ ಪಾಲಿಸುತ್ತಿಲ್ಲ ಎಂದು ತಂಡ ಗಮನಿಸಿದೆ.
ಅದೇ ರೀತಿ, ಶಬ್ದದ ಮಟ್ಟವನ್ನು ಅಳೆಯಲು ಸ್ಥಳದಲ್ಲಿ ಸಂಗ್ರಹಿಸಲಾದ ಅಂಕಿ-ಅಂಶಗಳು ಹಾಗೂ ಅಂತಿಮ ವಿಶ್ಲೇಷಣಾ ವರದಿಯಲ್ಲಿ ದಾಖಲಿಸಿರುವ ಅಂಕಿ-ಅಂಶಗಳ ನಡುವೆ ಕೂಡ ವ್ಯತ್ಯಾಸ ಕಂಡುಬಂದಿದೆ.
ಪ್ರಯೋಗಾಲಯದ ವರದಿ ಅನುಮಾನಾಸ್ಪದವಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇಂತಹ ಎಲ್ಲ ಪ್ರಯೋಗಾಲಯಗಳನ್ನು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.