ಬೆಂಗಳೂರು: ಜಾರಿ ನಿರ್ದೇಶನಾಲಯ (ED) ಇತ್ತೀಚಿಗೆ ನಡೆಸಿದ ದಾಳಿಗಳಿಗೆ ಕಾರಣವಾದ ಮಾಹಿತಿಯನ್ನು ಕಾಂಗ್ರೆಸ್‌ನೊಂದಿಗೆ ಸಂಪರ್ಕವಿದ್ದರೂ ರಾಜಕೀಯವಾಗಿ ಬಿಜೆಪಿಯತ್ತ ಒಲವು ಹೊಂದಿರುವ ವ್ಯಕ್ತಿಯೊಬ್ಬರು ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ದೂರು ನೀಡಿದವರು ಯಾರೆಂದು ತಮಗೆ ತಿಳಿದಿದೆ ಮತ್ತು ಆ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿರುವುದಾಗಿ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಇಡಿ ದಾಳಿಗೂ ಮುಂಚೆಯೇ ದೂರು ನೀಡಿದವರು ಯಾರೆಂದು ನನಗೆ ತಿಳಿದಿತ್ತು. ಇದನ್ನು ಈಗಾಗಲೇ ಮುಖ್ಯಮಂತ್ರಿಗೆ ತಿಳಿಸಿದ್ದೇನೆ. ಅವರು ಅದನ್ನು ನೋಡಿಕೊಳ್ಳುತ್ತಾರೆ. ದೂರು ನೀಡಬಾರದು ಎಂದೇನಿಲ್ಲ; ಪ್ರತಿಯೊಬ್ಬರಿಗೂ ದೂರು ನೀಡುವ ಹಕ್ಕಿದೆ. ಅವರು ಸಂಪೂರ್ಣವಾಗಿ ನಮ್ಮ ಪಕ್ಷದವರು ಎಂದು ಹೇಳಲಾಗುವುದಿಲ್ಲ. ಅವರ ಸಂಬಂಧಗಳು ಕಾಂಗ್ರೆಸ್‌ನೊಂದಿಗೆ ಇವೆ, ಆದರೆ ಅವರ ಮತಗಳು ಬಿಜೆಪಿಗೆ ಹೋಗುತ್ತವೆ. ಇದು 50-50 ರಂತಿದೆ ಎಂದು ತಿಳಿಸಿದರು.
ತಮ್ಮ ಪರವಾಗಿ ಬೆಂಬಲ ವ್ಯಕ್ತಪಡಿಸಿ ಮಾಜಿ ಮದ್ಯದ ಉದ್ಯಮಿ ವಿಜಯ್ ಮಲ್ಯ 'ಎಕ್ಸ್' (X) ನಲ್ಲಿ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಧನ್ಯವಾದಗಳು ಎಂದಷ್ಟೇ ಹೇಳಿದರು.
ಆಫ್ರಿಕಾದ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ತಮಗೆ ಶೇ. 40 ರಷ್ಟು ಪಾಲು ಇದೆ ಎಂಬ ಇಡಿಯ ಆರೋಪದ ಕುರಿತು ಮಾತನಾಡಿದ ಜಾರಕಿಹೊಳಿ, ದಾಖಲೆಗಳೊಂದಿಗೆ ಆ ಆರೋಪವನ್ನು ಸಾಬೀತುಪಡಿಸುವಂತೆ ಸಂಸ್ಥೆಗೆ ಸವಾಲು ಹಾಕಿದರು. "ಅವರ ಬಳಿ ದಾಖಲೆಗಳಿದ್ದರೆ, ಅದನ್ನು ಸಾಬೀತುಪಡಿಸಲಿ ಎಂದ ಅವರು, ನೋಟಿಸ್ ಬಂದ ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ಮತ್ತು ಸಂಸ್ಥೆಯ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಹೇಳಿದರು.
'ಜನರೇ ನನ್ನ ಮೊದಲ ಮೇಲ್ಮನವಿ ನ್ಯಾಯಾಲಯ': ED ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಪಿಡಬ್ಲ್ಯೂಡಿ (PWD) ಗೆ ಸಂಬಂಧಿಸಿದ ಹೂಡಿಕೆಗಳು ಮತ್ತು ಆರೋಪಗಳ ಉಲ್ಲೇಖವಿದೆಯೇ ಹೊರತು, ಯಾವುದೇ ಅಕ್ರಮವನ್ನು ಸಾಬೀತುಪಡಿಸಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಸಂಸ್ಥೆಯು ಸ್ವತಃ ಈ ಆರೋಪವನ್ನು ಸಂಶಯ ಎಂದಿದೆ. ಅವರು ನಮಗೆ ನೋಟಿಸ್ ನೀಡುತ್ತಾರೆ. ಅವರು ತಮ್ಮ ದಾಖಲೆಗಳನ್ನು ಮಂಡಿಸುತ್ತಾರೆ ಮತ್ತು ನಾವು ನಮ್ಮ ದಾಖಲೆಗಳನ್ನು ನೀಡುತ್ತೇವೆ. ಇನ್ನೂ ಸಮಯವಿದೆ. ಅವರು ನಮ್ಮನ್ನು ಕರೆಯಲಿ, ನಾವು ಹೋಗಿ ಎಲ್ಲವನ್ನೂ ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದರು.
ಇಡಿಯ ಹೇಳಿಕೆ ರಾಜಕೀಯವಾಗಿ ಹಾನಿ ಉಂಟುಮಾಡಬಹುದೇ ಎಂದು ಕೇಳಿದಾಗ, ಅದು ಸಾಧ್ಯವಿದೆ ಎಂದು ಜಾರಕಿಹೊಳಿ ಒಪ್ಪಿಕೊಂಡರು. ಸಾಮಾನ್ಯವಾಗಿ, ಇದು ಹಾನಿಯನ್ನುಂಟುಮಾಡುತ್ತದೆ. ಅವರು ಇದೊಂದು ಸಂಶಯ ಎಂದು ಹೇಳಿದ್ದಾರೆ. ನೋಡೋಣ," ಎಂದ ಅವರು, ಅಂತಿಮವಾಗಿ ಜನರೇ ತಮಗೆ ಮೊದಲ ಮೇಲ್ಮನವಿ ನ್ಯಾಯಾಲಯವಾಗಿದ್ದಾರೆ ಎಂದು ಹೇಳಿದರು.