ಬೆಂಗಳೂರು: ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್ ಠಾಣೆಯಿಂದ ಬೆಂಗಳೂರಿನ ಹೊರ ವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು.
ನಗರದಲ್ಲಿ ಹಳೆ ಸಮಸ್ಯೆ ಗುರುತಿಸಿ ದೈನಂದಿನ ಜೀವನದಲ್ಲಿ ಜನರಿಗೆ ಆಗುತ್ತಿದ್ದ ತೊಂದರೆ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ದಿ ಖಾತೆಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಫುಟ್‌ಪಾತ್ ತೆರವು ಕಾರ್ಯ ಮಾಡುವುದು, ಅನಾಥವಾಗಿ ಬಿದ್ದ ವಾಹನಗಳನ್ನ ಟೋಯಿಂಗ್ ಮಾಡೋದು ಡೆಬೆರಿಸ್ ತೆರವು ಕಾರ್ಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದೀಗ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ, ಹತ್ತಾರು ವರ್ಷಗಳಿಂದ ಜಪ್ತಿಯಾಗಿರುವ ವಾಹನಗಳನ್ನ ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜನರು, ಪೊಲೀಸ್ ಠಾಣೆಯ ಬಳಿ ವಾಹನಗಳು ಇವೆ, ಇದರಿಂದ ಜನರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ದೂರು ಸಲ್ಲಿಸಿದ್ದರು ಎಂದು ಸಚಿವರು ಹೇಳಿದ್ದಾರೆ.
ಶಾಸಕರು, ಸಂಸದರು ಕೂಡಾ ಒತ್ತಡ ಹೇರಿದ್ದರು
ಜಪ್ತಿಯಾಗಿರುವ ವಾಹನಗಳನ್ನು ತೆರವುಗೊಳಿಸುವಂತೆ, ಶಾಸಕರು, ಸಂಸದರು ಕೂಡ ಇದಕ್ಕೆ ಮುಕ್ತಿ ಕೊಡುವಂತೆ ಮನವಿ ಮಾಡಿದ್ದರು. ಹೀಗಾಗಿ ಎರಡು ತಿಂಗಳಿಂದ ಇದಕ್ಕೆ ಬೇಕಾದ ಪೂರ್ವಭಾವಿ ಸಭೆ ಮಾಡಿದ್ದೆವು. ಕೋರ್ಟ್ ಕೇಸ್‌ನಲ್ಲಿ ಸಿಲುಕಿರುವ ಕಾರಣ ವಿಶೇಷ ಮನವಿ ಮಾಡಿ ಕ್ಲಿಯರ್ ಮಾಡುವುದಕ್ಕೆ ತಿಳಿಸಿದ್ವಿ. ಫಾಸ್ಟ್ ಟ್ರ್ಯಾಕ್ ಮಾಡಲು ಆಗಲ್ಲ ಅಂತ ಕೋರ್ಟ್ ಹೇಳಿತ್ತು.
ಹೀಗಾಗಿ ಇವುಗಳನ್ನು ಬೇರೆ ಕಡೆ ಪಾರ್ಕ್ ಮಾಡೋಕೆ ಜಾಗ ಬೇಕು ಅಂತ ಪೊಲೀಸ್ ಇಲಾಖೆಯವರು ಕೇಳಿದ್ದರು. ಕಂದಾಯ ಇಲಾಖೆಯ ಬಳಿ ಮನವಿ ಮಾಡಿದಕ್ಕೆ 7 ಕಡೆ 26 ಎಕರೆ ಜಾಗ ನೀಡಿದ್ದಾರೆ. ಇವತ್ತಿನಿಂದ ಶಿಫ್ಟ್ ಮಾಡೋ ಕಾರ್ಯ ನಡೆಯಲಿದೆ, 11,346 ಗಾಡಿಗಳು ಪೊಲೀಸ್ ಇಲಾಖೆಯ ಸುತ್ತ ನಿಂತಿವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕೋರ್ಟ್ ಅನುಮತಿ ನೀಡುವವರೆಗೂ ತೆರವು ಮಾಡಲು ಸಾಧ್ಯವಿಲ್ಲ
ಕೋರ್ಟ್ ಕೇಸ್ ಇತ್ಯರ್ಥ ಆಗುವವರೆಗೂ ಇವುಗಳನ್ನು ತೆರವು ಮಾಡಲು ಆಗಲ್ಲ. ಹೀಗಾಗಿ ಇವುಗಳನ್ನು ಬೇರೆ ಕಡೆ ಶಿಫ್ಟ್ ಮಾಡಲಾಗುತ್ತೆ, ಜಯನಗರ 4th block ಅಲ್ಲಿ ಇದ್ದೇವೆ. ಇಲ್ಲಿ ಈ ರೀತಿ ಗುಜರಿ ವಾತವರಣ ನೋಡುವುದಕ್ಕೆ ಅಸಹ್ಯವಾಗುತ್ತೆ. ಜೊತೆಗೆ ಅನಧಿಕೃತ ಚಟುವಟಿಕೆಗಳಿಗೂ ಇದು ಕಾರಣ ಆಗುತ್ತಿತ್ತು. ಇದು ಇವತ್ತಿನ ಸಮಸ್ಯೆ ಅಲ್ಲ, ಹದಿನೈದು -ಇಪ್ಪತ್ತು ವರ್ಷಗಳಿಂದ ಪೊಲೀಸ್ ಇಲಾಖೆಯ ಸಮಸ್ಯೆ ಆಗಿದೆ. ಬರೋ ಒಂದು ತಿಂಗಳಲ್ಲಿ ಆದಷ್ಟು ಎಲ್ಲಾ ವಾಹನಗಳನ್ನ ಶಿಫ್ಟ್ ಮಾಡಲಾಗುತ್ತೆ ಎಂದು ಸಚಿವರು ಹೇಳಿದರು.