ರಾಮನಗರ: ಎಸ್ಪಿ ಕಚೇರಿಯ ಕಟ್ಟಡದಿಂದ ಹಾರಿ Pocso ಪ್ರಕರಣದ ಆರೋಪಿ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತನನ್ನು ಚನ್ನಪಟ್ಟಣದ ಅಕ್ಕೂರು ಹೊಸಹಳ್ಳಿ ಗ್ರಾಮದ ನಿವಾಸಿ ದೈಹಿಕ ಶಿಕ್ಷಕ ಶಶಿಧರ್ ಎಂದು ಗುರುತಿಸಲಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಶಶಿಧರ್ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ರಾಮನಗರದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಶಶಿಧರ್ ಅವರನ್ನು ಪೊಲೀಸರು ಬಂಧಿಸಿದ್ದರು.
ಹೆಚ್ಚಿನ ವಿಚಾರಣೆಗಾಗಿ ಬೆಳಗ್ಗೆ ಮೆಡಿಕಲ್ ಪರೀಕ್ಷೆ ಮಾಡಿಸಿ, ಬೆರಳಚ್ಚು ಪಡೆಯಲು ಎಸ್ಪಿ ಕಚೇರಿಗೆ ಕರೆತಂದಿದ್ದರು. ಈ ವೇಳೆ ಆರೋಪಿ 3ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಶಶಿಧರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಶಶಿಧರ್ ನನ್ನು ಬಂಧಿಸಲಾಗಿತ್ತು.