ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನು ಆನ್ ಲೈನ್ ಮುಖಾಂತರ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಗೋಲ್ಡ್ ಕಾರ್ಡ್' ಹೊಂದಿದವರಿಗೆ ಅಕ್ಟೋಬರ್ 21 ರಂದು ನಡೆಯಲಿರುವ 'ಜಂಬೂ ಸವಾರಿ' (ಮೆರವಣಿಗೆ), ಬನ್ನಿಮಂಟಪದ 'ಪಂಜಿನ ಕವಾಯತು' ಹಾಗೂ ಅತ್ಯಾಕರ್ಷಕ 'ಡ್ರೋನ್ ಶೋ' ವೀಕ್ಷಿಸಬಹುದಾಗಿದೆ.
ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರು ಈಗಲೇ ಅಧಿಕೃತ ಜಾಲತಾಣ https//mysoredasara.gov.inಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಗಳ ದರಗಳು ಕಳೆದ ವರ್ಷದಂತೆ ಇರುತ್ತದೆ. ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಜಂಬೂ ಸವಾರಿ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ ಹಾಗೂ ಒಂದು ದಿನದ ಡ್ರೋನ್ ಷೋ ಕಾರ್ಯಕ್ರಮ ವೀಕ್ಷಣೆಗಳಿಗೆ ಅವಕಾಶವಿರುತ್ತದೆ.
ಒಂದು ಗೋಲ್ಡ್ ಕಾರ್ಡ್ ಅಥವಾ ಒಂದು ಟಿಕೆಟ್ ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.