ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದ ಕೆಂಗಲ್ ಗೇಟ್ ಬಳಿ ನಿಲ್ಲಿಸಿದ್ದ ತಮ್ಮ ಕಾರನ್ನು ಅಲ್ಲಿಂದ ತೆಗೆಸಿ ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಿದ್ದಕ್ಕೆ ತೀವ್ರ ಆಕ್ರೋಶಗೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಡಿಸಿಪಿ ಯೋಗೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಭಾಗವಹಿಸಿದ ನಂತರ, ಮಧ್ಯಾಹ್ನದ ಊಟಕ್ಕಾಗಿ ತಮ್ಮ ಅಧಿಕೃತ ನಿವಾಸವಾದ 'ಕಾವೇರಿ'ಗೆ ತೆರಳಲು ಸಿದ್ದರಾಮಯ್ಯ ಹೊರಟಿದ್ದರು. ಈ ವೇಳೆ ಕೆಂಗಲ್ ಗೇಟ್ ಬಳಿ ನಿಲ್ಲಿಸಲಾಗಿದ್ದ ಅವರ ಕಾರನ್ನು ಡಿಸಿಪಿ ಸೂಚನೆಯ ಮೇರೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಕಾರು ವಾಪಸ್ ಬರುವವರೆಗೆ ಸಿದ್ದರಾಮಯ್ಯ ಗೇಟ್ ಬಳಿ ಕಾದು ನಿಂತರು. ನಂತರ ಸಿದ್ದರಾಮಯ್ಯ ಅವರು, ಡಿಸಿಪಿ ಯೋಗೇಶ್ ಅವರನ್ನು ಕರೆಸಿ, ವಾಹನವನ್ನು ಸ್ಥಳಾಂತರಿಸಿದ ನಿರ್ಧಾರದ ಬಗ್ಗೆ ಪ್ರಶ್ನಿಸಿದರು.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸದಂತೆ ಸೂಚಿಸಿದರು. ನಿಮ್ಮ ವಿರುದ್ಧ ಪ್ರಕರಣವೊಂದು ಇದೆ ಎಂಬುದು ನಿಮಗೆ ತಿಳಿದಿದೆ. ಅನಗತ್ಯ ಕೆಲಸಗಳನ್ನು ಮಾಡಬೇಡಿ. ಎಚ್ಚರಿಕೆಯಿಂದಿರಿ ಎಂದು ಅವರು ಡಿಸಿಪಿಗೆ ಎಚ್ಚರಿಕೆ ನೀಡಿದರು ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಡಿಸಿಪಿ "ಕ್ಷಮಿಸಿ ಸರ್" ಎಂದು ಕ್ಷಮೆಯಾಚಿಸಿದರು. ಹೀಗಾಗಿ ವಿಷಯವು ಅಲ್ಲಿಗೆ ಮುಕ್ತಾಯಗೊಂಡಿತು. ಈ ಮಧ್ಯೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸಿದರು. ನಂತರ ಪಶ್ಚಿಮ ದ್ವಾರದ ಹತ್ತಿರವೇ ವಾಹನ ನಿಲುಗಡೆಗೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.