ಬೆಂಗಳೂರು: ನಮ್ಮ ಮೆಟ್ರೋ ಪಿಂಕ್ ಲೈನ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ಎರಡು ವಾರಗಳಲ್ಲಿ ಪ್ರಾಯೋಗಿಕ ಸಂಚಾರ ಅಥವಾ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪೂರಕವಾಗಿ ಹೊಸ ರೈಲುಗಳ ಚಾಲನೆಗೆ ರೈಲ್ವೆ ಮಂಡಳಿ ಅಧಿಕೃತ ಅನುಮೋದನೆ ನೀಡಿದ್ದು, ಅಕ್ಟೋಬರ್ ಮಧ್ಯಭಾಗದಲ್ಲಿ ಈ ಮಾರ್ಗ ಉದ್ಘಾಟನೆಯಾಗುವ ಸಾಧ್ಯತೆ ದಟ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಮೊದಲ ಹಂತದಲ್ಲಿ ಚಾಲನೆಗೊಳ್ಳುವ ಮಾರ್ಗ...
ಪಿಂಕ್ ಲೈನ್‌ನ ಮೊದಲ ಹಂತವಾಗಿ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ (ಸ್ವಾಗತ್ ಕ್ರಾಸ್) 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ (ಮೇಲ್ಸೇತುವೆ) ಮಾರ್ಗ ಸಾರ್ವಜನಿಕ ಮುಕ್ತವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳು ಇರಲಿವೆ: ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ (ಇಲ್ಲಿ ಹಳದಿ ಮಾರ್ಗಕ್ಕೆ ಇಂಟರ್‌ಚೇಂಜ್ ಸೌಲಭ್ಯವಿದೆ) ಹಾಗೂ ತಾವರೆಕೆರೆ.
ಮುಂದುವರೆದು, ಮೊದಲ ಹಂತದ ಎಲಿವೇಟೆಡ್ ಮಾರ್ಗ ಮುಕ್ತಾಯವಾಗುವ ತಾವರೆಕೆರೆಯಿಂದ (ಸ್ವಾಗತ್ ಕ್ರಾಸ್) ನಾಗವಾರದವರೆಗೆ ಒಟ್ಟು 13.92 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಇದಾಗಿದೆ. ಈ ಬೃಹತ್ ಸುರಂಗ ಮಾರ್ಗದಲ್ಲಿ ಒಟ್ಟು 12 ಅಂಡರ್‌ಗ್ರೌಂಡ್ ನಿಲ್ದಾಣಗಳು ಬರಲಿವೆ: ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ (ಇಲ್ಲಿ ನೇರಳೆ ಮಾರ್ಗಕ್ಕೆ ಪ್ರಮುಖ ಇಂಟರ್‌ಚೇಂಜ್ ಕಲ್ಪಿಸುತ್ತದೆ), ಶಿವಾಜಿನಗರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಭಾರತೀಯ ರೈಲ್ವೆ ಸಂಪರ್ಕಪಾಟರ್ಸ್ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜ್, ನಾಗವಾರ (ಅಂತಿಮ ನಿಲ್ದಾಣವಾಗಿದ್ದು, ಇಲ್ಲಿಂದ ವಿಮಾನ ನಿಲ್ದಾಣದ ಬ್ಲೂ ಲೈನ್‌ಗೆ ಸಂಪರ್ಕ ಸಿಗಲಿದೆ).
ಏತನ್ಮಧ್ಯೆ, ಆರಂಭಿಕ ಹಂತದಲ್ಲಿ ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಒಟ್ಟು 6 ರೈಲುಗಳನ್ನು ಕಾರ್ಯಾಚರಣೆಗೊಳಿಸಲು ಯೋಜಿಸಿದೆ. ಅದರಂತೆ, ಸಾಮಾನ್ಯ ವೇಳೆಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಹಾಗೂ ಪೀಕ್ ಅವರ್ ನಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.
ಹಾಗಾದ್ರೆ, ಯಾವಾಗ ಓಪನ್?
ಕೆಲವು ದಿನಗಳ ಹಿಂದಷ್ಟೇ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದ ಕಾರ್ಯಚಾರಣೆಯ ಮೊದಲ ಹಂತದ ಸಿಗ್ನಲಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖಾ ಸಂಸ್ಥೆಯಿಂದ 'ಇಂಡಿಪೆಂಡೆಂಟ್ ಸೇಫ್ಟಿ ಅಸೆಸರ್' (ISA) ಪ್ರಮಾಣಪತ್ರ ಲಭ್ಯವಾಗಿತ್ತು. ಇದರ ಬೆನ್ನಲ್ಲೇ, ಇದೀಗ ಬಿಇಎಂಎಲ್ ನಿರ್ಮಿತ ಕೋಚ್‌ಗಳ ಓಟಕ್ಕೂ ರೈಲ್ವೆ ಮಂಡಳಿ ತಾತ್ಕಾಲಿಕ ಮಂಜೂರಾತಿ ನೀಡಿದೆ. ಅದರಂತೆ, ಅಕ್ಟೋಬರ್ ಮೊದಲ ವಾರದಲ್ಲಿ 2 ದಿನಗಳ ಕಾಲ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ಅಂತಿಮ ತಪಾಸಣೆ ನಡೆಸಲಿದ್ದು, ಇದಾದ ತಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ಅಕ್ಟೋಬರ್ ಎರಡನೇ ವಾರ ಅಥವಾ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಮತ್ತೊಂದೆಡೆ, ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಇಡೀ ಸುರಂಗ ಮಾರ್ಗದಲ್ಲಿ ರೈಲುಗಳ ಪ್ರಾಯೋಗಿಕ ಸಂಚಾರ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಎಲ್ಲಾ ಸುರಕ್ಷತಾ ತಪಾಸಣೆಗಳು ಮುಗಿದು 2027ರ ಜೂನ್ ಅಥವಾ ಜುಲೈ ವೇಳೆಗೆ ಈ ಸುರಂಗ ಮಾರ್ಗವು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ಈ ಸುರಂಗ ಮಾರ್ಗವು ಪೂರ್ಣಗೊಂಡರೆ ಬನ್ನೇರುಘಟ್ಟ ರಸ್ತೆಯಿಂದ ನೇರವಾಗಿ ಎಂ.ಜಿ. ರಸ್ತೆ ಮತ್ತು ನಾಗವಾರಕ್ಕೆ ಕೇವಲ 25-30 ನಿಮಿಷಗಳಲ್ಲಿ ತಲುಪಬಹುದು.