ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಶುಕ್ರವಾರ ತಡರಾತ್ರಿ ನಡೆದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ, ಡಿಜೆ ವಾಹನಕ್ಕೆ ವಿದ್ಯುತ್ ತಂತಿ ತಗುಲಿದ್ದು, ಅವಘಡದಲ್ಲಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಹುಬ್ಬಳ್ಳಿ - ಧಾರವಾಡ ಮೂಲದ ಬಸವರಾಜು ಹಾಗೂ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಅವರಿಬ್ಬರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರು ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಲಂಕೃತ ಮಂಟಪಗಳ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಡಿಜೆ ವಾಹನದ ಮೇಲಿದ್ದ ಐವರಿಗೆ ವಿದ್ಯುತ್ ತಂತಿ ತಗುಲಿದೆ. ಈ ಅವಘಡದಿಂದ ಐವರು ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಓರ್ವನ ಮೈಮೇಲಿನ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಆದರೆ ಇಬ್ಬರು ಸ್ಥಳದಲ್ಲೇ ಪ್ರಜ್ಞಾಹೀನರಾಗಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು ಮತ್ತು ವೈದ್ಯರೊಂದಿಗೆ ಚರ್ಚಿಸಿದರು.