ಸಂಗ್ರಹ ಚಿತ್ರ 
ರಾಜ್ಯ

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ; SIT ಮುಂದಿವೆ ಸಾವಿರ ಸವಾಲು!

ಈಗಾಗಲೇ ಸಾಕ್ಷಿಗಳನ್ನು ಗುರುತಿಸಲಾಗಿದೆ ಮತ್ತು ತನಿಖೆ ನಡೆಸಲಾಗಿದೆ. ಈ ಸಾಕ್ಷಿಗಳನ್ನು ಸಂಪರ್ಕಿಸಿ ಮರು-ವಿಚಾರಣೆ ನಡೆಸಬಹುದು ಹಾಗೂ ಅಗತ್ಯವಿದ್ದಲ್ಲಿ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಬಹುದು.

ಬೆಂಗಳೂರು: ಧರ್ಮಸ್ಥಳದ 17 ವರ್ಷದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕರ್ನಾಟಕ ಪೊಲೀಸರು ಹೊಸದಾಗಿ ಸಮಗ್ರ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿರುವ ಬೆನ್ನಲ್ಲೇ ಮರು ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ (SIT) ಇದೀಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅಪರಾಧ ನಡೆದು ಸುಮಾರು 14 ವರ್ಷಗಳು ಕಳೆದಿದ್ದು, ಘಟನಾವಳಿಗಳ ಸರಮಾಲೆಯನ್ನು ಮರುಸಂಯೋಜಿಸುವುದು ಹಾಗೂ ಹಳೆಯ ಜೈವಿಕ ಮತ್ತು ಇತರ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳು ಇನ್ನೂ ಸುರಕ್ಷಿತವಾಗಿವೆಯೇ ಮತ್ತು ಬಳಕೆಗೆ ಯೋಗ್ಯವಾಗಿವೆಯೇ ಎಂಬುದನ್ನು ನಿರ್ಧರಿಸುವುದು ತಂಡಕ್ಕೆ ಸವಾಲಾಗಿ ಪರಿಣಮಿಸಿದೆ. ಅಲ್ಲದೆ, ಸಾಕ್ಷಿದಾರರನ್ನು ಪತ್ತೆಹಚ್ಚುವುದು ಮತ್ತು ಅವರ ನೆನಪುಗಳನ್ನು ಒರೆಗೆ ಹಚ್ಚುವುದು ಕೂಡ ಒಂದು ಸವಾಲಾಗಿರಲಿದೆ.

ಸೌಜನ್ಯ ನಾಪತ್ತೆಯಾದ ಸ್ಥಳದಿಂದ ಹಿಡಿದು ಆಕೆಯ ಮೃತದೇಹ ಪತ್ತೆಯಾದ ಸ್ಥಳದವರೆಗೆ, ಈ ಪ್ರಕರಣದ ಪ್ರಾಥಮಿಕ ಮತ್ತು ದ್ವಿತೀಯ ಅಪರಾಧದ ಸ್ಥಳಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ. 'ಅಪರಾಧ ನಡೆದು 14 ವರ್ಷಗಳ ನಂತರ ಹೊಸ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಬಹುತೇಕ ಅಸಾಧ್ಯ; ಏಕೆಂದರೆ ಕಾಲಕ್ರಮೇಣ ಸಾಕ್ಷ್ಯಗಳು ಹಾಳಾಗಿರಬಹುದು ಅಥವಾ ಕಳೆದುಹೋಗಿರಬಹುದು'.

'ಹಿಂದಿನ ತನಿಖೆಗಳ ವೇಳೆ ಸಂಗ್ರಹಿಸಲಾದ ಫೋರೆನ್ಸಿಕ್ ಸಾಕ್ಷ್ಯಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಮತ್ತು SIT ಅವುಗಳನ್ನು ಪರಿಶೀಲಿಸಬಹುದು. ಒಂದು ವೇಳೆ ಯಾವುದೇ ಹೊಸ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾದರೆ, ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲು ಅದು SITಗೆ ನೆರವಾಗಬಹುದು' ಎಂದು ತಜ್ಞರೊಬ್ಬರು ತಿಳಿಸಿದರು.

ಮಾಜಿ ಡಿಜಿ ಮತ್ತು ಐಜಿಪಿ ಎಸ್.ಟಿ. ರಮೇಶ್ ಅವರು ಟಿಎನ್‌ಐಇ ಜೊತೆ ಮಾತನಾಡಿ, '14 ವರ್ಷಗಳ ಸುದೀರ್ಘ ಅಂತರವು ಖಂಡಿತವಾಗಿಯೂ ಒಂದು ಸವಾಲಾಗಿದೆ; ಆದರೆ, ಇದೇ ಕಾರಣಕ್ಕಾಗಿಯೇ ಈ ಪ್ರಕರಣದ ತನಿಖೆಯತ್ತ ವಿಶೇಷ ಗಮನಹರಿಸಲು SITಯನ್ನು ರಚಿಸಲಾಗಿದೆ' ಎಂದು ಹೇಳಿದರು.

ತಂಡವು 2012ರಲ್ಲಿ ಅಪರಾಧ ನಡೆದ ಸ್ಥಳವು ಹೇಗಿತ್ತೋ ಹಾಗೆಯೇ ಅದನ್ನು ಮರುಸೃಷ್ಟಿಸಬೇಕಿದೆ; ಜೊತೆಗೆ ಡಿಎನ್‌ಎ (DNA) ಮತ್ತು ಡಿಜಿಟಲ್ ಸಾಕ್ಷ್ಯಗಳಲ್ಲದೆ, ಸಾಕ್ಷಿಗಳ ಹೇಳಿಕೆಗಳು, ದಾಖಲೆಗಳು, ವೈದ್ಯಕೀಯ, ವಿಧಿವಿಜ್ಞಾನ ಮತ್ತು ಪರೋಕ್ಷ ಸಾಕ್ಷ್ಯಗಳು ಸೇರಿದಂತೆ ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿ ಸಂಗ್ರಹಿಸಬೇಕಿದೆ. ಆದಾಗ್ಯೂ, ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಸಿಬಿಐ ನಡೆಸಿದ ಹಿಂದಿನ ತನಿಖೆಗಳು ಸಹ ಅನುಕೂಲಕರವಾಗಬಹುದು. ಏಕೆಂದರೆ ಈ ಸಂಬಂಧ ಈಗಾಗಲೇ ಸಾಕಷ್ಟು ಪೂರ್ವಭಾವಿ ಕೆಲಸಗಳು ನಡೆದಿವೆ ಎಂದು ಅವರು ಗಮನಸೆಳೆದರು.

ಈಗಾಗಲೇ ಸಾಕ್ಷಿಗಳನ್ನು ಗುರುತಿಸಲಾಗಿದೆ ಮತ್ತು ತನಿಖೆ ನಡೆಸಲಾಗಿದೆ. ಈ ಸಾಕ್ಷಿಗಳನ್ನು ಸಂಪರ್ಕಿಸಿ ಮರು-ವಿಚಾರಣೆ ನಡೆಸಬಹುದು ಹಾಗೂ ಅಗತ್ಯವಿದ್ದಲ್ಲಿ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಬಹುದು.

'ಅದೇ ಸಮಯದಲ್ಲಿ, ಹಿಂದಿನ ತನಿಖೆಗಳ ದಿಕ್ಕಿನಿಂದ ಪ್ರಭಾವಿತವಾಗದಂತೆ ಎಸ್‌ಐಟಿ ಎಚ್ಚರಿಕೆ ವಹಿಸಬೇಕು. ಸಾಕ್ಷ್ಯಗಳು ಬೇರೆಯದೇ ದಿಕ್ಕಿನತ್ತ ಬೊಟ್ಟು ಮಾಡುತ್ತಿದ್ದರೆ, ಆ ಹಾದಿಯಲ್ಲಿ ಮುಂದುವರಿಯುವ ಧೈರ್ಯವನ್ನು ತಂಡವು ಹೊಂದಿರಬೇಕು' ಎಂದು ರಮೇಶ್ ಹೇಳಿದರು.

'ಸಾಕ್ಷಿದಾರರು ತನಿಖೆಯ ಮತ್ತೊಂದು ಪ್ರಮುಖ ಅಂಶವಾಗಲಿದ್ದಾರೆ. ಇಷ್ಟು ದೀರ್ಘಾವಧಿಯ ನಂತರ, ಘಟನೆಗಳ ಕುರಿತಾದ ಅವರ ನೆನಪುಗಳು ಅವರು ನೀಡಿದ್ದ ಮೂಲ ಹೇಳಿಕೆಗಳಿಗಿಂತ ಭಿನ್ನವಾಗಿರಬಹುದು. ಎಸ್‌ಐಟಿ ಪ್ರಮುಖ ಸಾಕ್ಷಿದಾರರನ್ನು ಪತ್ತೆಹಚ್ಚಿ, ಅವರ ಹೇಳಿಕೆಗಳನ್ನು ಮತ್ತೆ ದಾಖಲಿಸಬೇಕು ಮತ್ತು ಹಿಂದಿನ ತನಿಖೆಗಳ ವೇಳೆ ದಾಖಲಾದ ಹೇಳಿಕೆಗಳೊಂದಿಗೆ ಅವುಗಳನ್ನು ಹೋಲಿಸಿ ನೋಡಬೇಕು. ಕೆಲ ಸಾಕ್ಷಿದಾರರು ಹೊಸ ಮಾಹಿತಿಯನ್ನೂ ನೀಡಬಹುದು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

'ಲಭ್ಯವಿರುವ ಪ್ರತಿಯೊಂದು ಸಾಕ್ಷ್ಯವನ್ನೂ ಸ್ವತಂತ್ರವಾಗಿ ಪರಿಶೀಲಿಸಬೇಕು. ಹಿಂದಿನ ತನಿಖೆಗಳ ವೇಳೆ ವಿಚಾರಣೆಗೆ ಒಳಪಡದ ಯಾವುದೇ ಸಾಕ್ಷಿಗಳಿದ್ದಾರೆಯೇ ಎಂಬುದನ್ನು ಕೂಡ ಎಸ್‌ಐಟಿ ಪರಿಶೀಲಿಸಬೇಕು' ಎಂದು ಅವರು ಹೇಳಿದರು.

ಯಾವುದಾದರೂ ಸಂಬಂಧಿತ ದಾಖಲೆಗಳು ಉಳಿದುಕೊಂಡಿದ್ದರೆ ಡಿಜಿಟಲ್ ಸಾಕ್ಷ್ಯಗಳು ಉಪಯುಕ್ತವಾಗಬಲ್ಲವು. 'ಕರೆ ವಿವರಗಳ ದಾಖಲೆಗಳು (CDR), ಎಲೆಕ್ಟ್ರಾನಿಕ್ ಸಂವಹನಗಳು, ಸ್ಥಳದ ಮಾಹಿತಿ ಅಥವಾ ಇತರ ಡಿಜಿಟಲ್ ದಾಖಲೆಗಳನ್ನು ಸಂರಕ್ಷಿಸಿಟ್ಟಿದ್ದರೆ, ಅವು ಸಂತ್ರಸ್ತರು ಮತ್ತು ಶಂಕಿತರ ಚಲನವಲನಗಳನ್ನು ಖಚಿತಪಡಿಸಲು ಸಹಾಯ ಮಾಡಬಲ್ಲವು' ಎಂದು ಮತ್ತೊಬ್ಬ ವಿಧಿವಿಜ್ಞಾನ ತಜ್ಞರು ಹೇಳಿದರು.

ಏನಿದು ಪ್ರಕರಣ?

17 ವರ್ಷದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ, 2012ರ ಅಕ್ಟೋಬರ್ 9ರ ಸಂಜೆ ನೇತ್ರಾವತಿ ಸ್ನಾನಘಟ್ಟದ ​​ಬಳಿ ಬಸ್ಸಿನಿಂದ ಇಳಿದ ನಂತರ ನಾಪತ್ತೆಯಾಗಿದ್ದರು. ಮರುದಿನ ಅವರ ಮೃತದೇಹ ಪತ್ತೆಯಾಯಿತು; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅವರ ಮೇಲೆ ಅತ್ಯಾಚಾರವಾಗಿರುವುದು ಪತ್ತೆಯಾಗಿತ್ತು.

ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಕಳದ ಗುತ್ತಿಗೆ ಆಧಾರಿತ ಕೆಲಸಗಾರನಾದ ಸಂತೋಷ್ ರಾವ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಯನ್ನಾಗಿ ಬಂಧಿಸಿದರು.

ನಂತರ ಈ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸಲಾಯಿತು ಮತ್ತು ಅದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತು. ಸಾರ್ವಜನಿಕ ಆಕ್ರೋಶ ಮತ್ತು ಪ್ರತಿಭಟನೆಗಳ ನಂತರ, 2013ರ ನವೆಂಬರ್‌ನಲ್ಲಿ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಯಿತು.

ಕೇಂದ್ರೀಯ ತನಿಖಾ ಸಂಸ್ಥೆಯು ರಾವ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿತ್ತು. ಆದಾಗ್ಯೂ, 2024ರಲ್ಲಿ ನಡೆದ ವಿಚಾರಣೆಯ ನಂತರ ಸಿಬಿಐ ವಿಶೇಷ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿತು. ಸೆಪ್ಟೆಂಬರ್ 21ರಂದು, ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಆದೇಶಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಪ್ರತಿಭಟನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ: ಸಚಿವ ಹೆಚ್.ಸಿ. ಬಾಲಕೃಷ್ಣ ಪೊಲೀಸರನ್ನು ಛೂಬಿಟ್ರಾ? ಜೆಡಿಎಸ್ ಆರೋಪ Video

ಭಜನಾ ಕಾರ್ಯಕ್ರಮ: 'ಹನುಮಾನ್ ಅಂಶ್'ನ 'ಪಾರ್ವತಿ' ಹಾಡಿಗೆ ದನಿಗೂಡಿಸಿ, ಕಂಜೀರಾ ನುಡಿಸಿದ ಪ್ರಧಾನಿ ಮೋದಿ! Video

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ