ಜೆಡಿಎಸ್ ತೆಕ್ಕೆಗೆ ರಾಜೂಗೌಡ; ಶಾಸಕ ಸ್ಥಾನಕ್ಕೆ ರಾಜಿನಾಮೆ
ಬಿಜೆಪಿಯ ಸುರಪುರ ಶಾಸಕ ರಾಜೂಗೌಡ ಬಿಜೆಪಿಗೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ತೆಕ್ಕೆಗೆ ಸೇರಿದ್ದಾರೆ.
ಬೆಂಗಳೂರು: ಬಿಜೆಪಿಯ ಸುರಪುರ ಶಾಸಕ ರಾಜೂಗೌಡ ಬಿಜೆಪಿಗೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ತೆಕ್ಕೆಗೆ ಸೇರಿದ್ದಾರೆ.
ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಟಿಕೆಟ್ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದ ರಾಜೂಗೌಡ ಕೊನೆಗೂ ತಮ್ಮ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಇಂದು ಅಧಿಕೃತವಾಗಿ ಬಿಜೆಪಿ ತ್ಯಜಿಸಿರುವ ರಾಜೂಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇಂದು ಸಂಜೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಭೇಟಿ ಮಾಡಿದ್ದ ಅವರು, ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಿನ್ನೆ ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ರಾಜೂಗೌಡ, ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿ ಅವರಿಂದ ಸಕಾರತ್ಮಕ ಆಶ್ವಾಸನೆ ದೊರೆತ ಹಿನ್ನಲೆಯಲ್ಲಿ ರಾಜೂಗೌಡ ಜೆಡಿಎಸ್ ಸೇರಲು ಮುಂದಾಗಿದ್ದಾರೆ. ಅಲ್ಲದೆ ರಾಜೂಗೌಡ ಅವರಿಗೆ ಸುರಪುರ ಕ್ಷೇತ್ರದಿಂದಲೇ ಜೆಡಿಎಸ್ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಾರೆ ರಾಜಕಾರಣಿಗಳ ಪಕ್ಷಾಂತರ ಪರ್ವ ಮುಂದುವರೆದಿದ್ದು, ಚುನಾವಣೆ ಮುಗಿಯುವ ಹೊತ್ತಿಗೆ ಯಾರು ಯಾವ ಪಕ್ಷದಲ್ಲಿರುತ್ತಾರೆ ಎಂದು ಹೇಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ರಾಜಕಾರಣಿಗಳು ತಮ್ಮ ತಮ್ಮ ನೆಲೆ ಬದಲಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಊಸರವಳ್ಳಿಗಳ ಸಂಖ್ಯೆ ಎಷ್ಟಾಗಬಹುದು...? ಕಾದು ನೋಡೋಣ..