ಮತ್ತೈದು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಪ್ರಣಬ್
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಮತ್ತೆ ಐದು ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಮತ್ತೆ ಐದು ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮತ್ತೆ ಐದು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸುವುದರ ಮೂಲಕ ನೂತನ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ಮೊದಲ ರಾಷ್ಟ್ರಪತಿ ಎಂಬ 'ಖ್ಯಾತಿ' ಪ್ರಣಬ್ ಮುಖರ್ಜಿ ಅವರಿಗೆ ಸಂದಿದೆ. ವಿವಿಧ ಅಪರಾಧಗಳ ಹಿನ್ನಲೆಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ 7 ಖೈದಿಗಳ ಪೈಕಿ ಐವರ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.
ಸಂವಿಧಾನದ ಅನುಚ್ಛೇದ 72ರ ಅಡಿಯಲ್ಲಿ ರಾಷ್ಟ್ರಪತಿಗಳಿಗೆ ನೀಡಿರುವ ವಿಶೇಷ ಹಕ್ಕಿನ ಅನ್ವಯ, ಪ್ರಣಬ್ ಮುಖರ್ಜಿ ಅವರು ಇಬ್ಬರಿಗೆ ಕ್ಷಮಾದಾನ ನೀಡಿದ್ದಾರೆ. ಇವರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಟು ಮಾಡಿದ್ದಾರೆ. ಆದರೆ ಕ್ಷಮಾದಾನ ಪಡೆದ ಖೈದಿಗಳ ವಿವರವನ್ನು ಬಹಿರಂಗಗೊಳಿಸಿಲ್ಲ.
ಕ್ಷಮಾದಾನ ತಿರಸ್ಕೃತಗೊಂಡ ಖೈದಿಗಳ ವಿವರ ಇಂತಿದೆ.
ಉತ್ತರ ಪ್ರದೇಶದ ಗುರ್ಮೀತ್ ಸಿಂಗ್
1986ರ ಆಗಸ್ಟ್ 17 ರಂದು ಒಂದೇ ಕುಟುಂಬದ 13 ಮಂದಿಯನ್ನು ಅಮಾನುಷವಾಗಿ ಕೊಂದು ಹಾಕಿದ್ದನು.
ಹರ್ಯಾಣದ ಧರ್ಮಪಾಲ್
1993ರಲ್ಲಿ ಓರ್ವ ಬಾಲಕಿಯನ್ನು ಅತ್ಯಾಚಾರ ಮಾಡಿ ಅದೇ ಕುಟುಂಬದ ಐವರನ್ನು ಕೊಂದು ಹಾಕಿದ್ದನು.
ಹರ್ಯಾಣದ ಮಾಜಿ ಶಾಸಕರ ಪುತ್ರಿ ಸೋನಿಯಾ ಮತ್ತು ಆಕೆಯ ಪತಿ ಸಂಜೀವ್
ಈ ಇಬ್ಬರು ದಂಪತಿಗಳು ಸೇರಿ 2001ರಲ್ಲಿ ತಮ್ಮದೇ ಕುಟುಂಬದ 8 ಮಂದಿಯನ್ನು ಕ್ರೂರವಾಹಿ ಹತ್ಯೆಗೈದಿದ್ದರು.
ಉತ್ತರ ಪ್ರದೇಶದ ಸುರೇಶ್ ಮತ್ತು ರಾಮಜೀ
ತಮ್ಮ ಸಹೋದರ ಸಂಬಂಧಿ ಕುಟುಂಬದ ಐದು ಮಂದಿಯನ್ನು ಕೊಂದಿದ್ದರು.
ಇನ್ನುಳಿದಂತೆ ರಾಷ್ಟ್ರಪತಿಗಳ ಮುಂದಿರುವ ಮುಂದಿನ ಕ್ಷಮಾದಾನ ಅರ್ಜಿಗಳೆಂದರೆ
ಕರ್ನಾಟಕದ ಪ್ರವೀಣ್ ಕುಮಾರ್
1994ರ ಫೆಬ್ರವರಿ 23 ರಂದು ಪ್ರವೀಣ್ ಒಂದೇ ಕುಟುಂಬದ ಐವರನ್ನು ಅಮಾನುಷವಾಗಿ ಕೊಲೆಗೈದಿದ್ದನು.
ಉತ್ತರ ಪ್ರದೇಶದ ಜಾಫರ್ ಅಲಿ
2002ರಲ್ಲಿ ತನ್ನ ಪತ್ನಿ ಮತ್ತು ಐವರು ಪುತ್ರಿಯರನ್ನು ಕೊಂದು ಹಾಕಿದ್ದನು.
ಉತ್ತರಾಖಂಡದ ಸುಂದರ್ ಸಿಂಗ್
1989ರಲ್ಲಿ ಯುವತಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಕ್ರೂರವಾಗಿ ಕೊಂದುಹಾಕಿದ್ದನು.