'ಮದುವೆ ಮತ್ತು ಪಿಎಂ ಹುದ್ದೆ ಅಸಂಬದ್ಧ ಪ್ರಶ್ನೆ': ರಾಹುಲ್ ಗಾಂಧಿ
ನನ್ನ ಪ್ರಕಾರ ಮದುವೆಯಾಗುವುದು ಮತ್ತು ಪ್ರಧಾನಿ ಹುದ್ದೆಗೇರುವುದು ಎರಡೂ ಅಸಂಬದ್ಧ ಪ್ರಶ್ನೆಗಳಾಗುತ್ತವೆ ಎಂದು ರಾಹುಲ್ ಗಾಂಧಿ ಹೇಳಿದರು.
ನವದೆಹಲಿ: ತಮ್ಮ ಮದುವೆ ಮತ್ತು ಪ್ರಧಾನಿ ಹುದ್ದೆಗೇರುವ ಕುರಿತು ಎದ್ದಿರುವ ಊಹಾಪೊಹಗಳಿಗೆ ತೆರೆ ಎಳೆದಿರುವ ರಾಹುಲ್ ಗಾಂಧಿ, ನನ್ನ ಪ್ರಕಾರ ಮದುವೆಯಾಗುವುದು ಮತ್ತು ಪ್ರಧಾನಿ ಹುದ್ದೆಗೇರುವುದು ಎರಡೂ ಅಸಂಬದ್ಧ ಪ್ರಶ್ನೆಗಳಾಗುತ್ತವೆ ಎಂದಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಭಾರತೀಯ ಉದ್ಯಮ ಒಕ್ಕೂಟದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, 'ಮಾಧ್ಯಮ ಮಿತ್ರರೊಬ್ಬರು ನನ್ನ ಬಳಿ ಬಂದು ನೀವು ಮದುವೆಯಾಗುತ್ತಿದ್ದೀರಂತೆ. ಪ್ರಧಾನಿ ಕೂಡ ಆಗುತ್ತಿದ್ದೀರಂತೆ ಎಂದು ಕೇಳಿದರು. ಆದರೆ ನನ್ನ ಪಾಲಿಗೆ ಇಂತಹ ಪ್ರಶ್ನೆಗಳೆಲ್ಲಾ ಅಸಂಬದ್ಧವೆನಿಸಿಕೊಳ್ಳುತ್ತವೆ. ನನ್ನ ಪ್ರಮುಖ ಪ್ರಶ್ನೆ ಎಂದರೆ ನಾವು ಹೇಗೆ ಜನರ ಧ್ವನಿಯಾಗಬಲ್ಲೆವು ಮತ್ತು ಹೇಗೆ ಅವರ ಸಹಾಯಕ್ಕೆ ನಿಲ್ಲಬಲ್ಲೆವು' ಎಂಬುದು ಮಾತ್ರ ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರುವ ಕುರಿತು ಕಾಂಗ್ರೆಸ್ ಪಕ್ಷದ ವಕ್ತಾರ ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಮಾತನಾಡಿದ್ದರು. ಆದರೆ ಈಗ ಸ್ವತಃ ರಾಹುಲ್ ಗಾಂಧಿ ಅವರೇ ತಮ್ಮ ಮದುವೆ ಮತ್ತು ಪಿಎಂ ಹುದ್ದೆ ಕುರಿತು ಸ್ಪಷ್ಟೀಕರಣ ನೀಡಿ ತೆರೆ ಎಳೆದಿದ್ದಾರೆ.