ಶಾಸಕ ವಿಶ್ವನಾಥ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಬೆಂಗಳೂರು: ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಬೆಂಗಳೂರು ಸಮೀಪದ ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಾರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಅರ್ಜಿ ವಜಾಗೊಂಡಿದೆ. ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಶಾಸಕ ವಿಶ್ವನಾಥ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಶಾಸಕ ವಿಶ್ವನಾಥ್ ಅವರನ್ನು ವಿಚಾರಣೆ ಸಂಬಂಧ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಲು ಇದ್ದ ತಡೆ ದೂರವಾಗಿದೆ.
ಬೆಂಗಳೂರಿನ ಯಲಹಂಕ ಬಳಿಯ ಮಾದಪ್ಪನ ಹಳ್ಳಿಯ ಸರ್ವೇ ನಂಬರ್ 62 ರಲ್ಲಿನ 32 ಎಕರೆ ಸರ್ಕಾರಿ ಭೂಮಿಯನ್ನು ಡಿಸಿ ಅಯ್ಯಪ್ಪ ಅವರು ಸ್ಥಳೀಯ ಶಾಸಕ ವಿಶ್ವನಾಥ್ ಅವರ ಸಂಬಂಧಿ ನರಸಿಂಹಯ್ಯ ಅವರಿಗೆ ಪರಭಾರೆ ಮಾಡಿಕೊಡಲು ಯತ್ನಿಸಿದ್ದರು. ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಕೆ ಅಯ್ಯಪ್ಪ, ಕಂದಾಯ ನೋಂದಣಾಧಿಕಾರಿ ರವಿಕುಮಾರ್, ವಿಶೇಷ ತಹಶೀಲ್ದಾರ್ ಗೋಪಾಲಸ್ವಾಮಿ ಮತ್ತು ಕಂದಾಯ ಇಲಾಖೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ಬಂಧಿಸಿದ್ದರು.
ಸರ್ಕಾರಿ ಗೋಮಾಳ ಜಾಗವನ್ನು ಅಕ್ರಮವಾಗಿ ಮಾರಲು ಯತ್ನಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬೆಂಗಳೂರು ಗ್ರಾಮಾಂತರ ಡಿಸಿ ಆಗಿದ್ದ ಎಂ.ಕೆ.ಅಯ್ಯಪ್ಪ, ಜಮೀನಿನ ಭೂ ದಾಖಲೆಯನ್ನೇ ತಿರುಚಲು ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯ ಶಾಸಕ ವಿಶ್ವನಾಥ್ ಅವರೊಂದಿಗೂ ಸಹ ಅವರು ದೂರವಾಣಿಯಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.