ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕಲಿ ಎನ್‌ಕೌಂಟರ್: 3 ಪೊಲೀಸರಿಗೆ ಗಲ್ಲು

ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

Srinivasa Murthy VN
Updated On : 5 Apr 2013, 6:37 am

ಲಖನೌ: ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

1982ರಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಾಧೋಪುರ್ ಗ್ರಾಮದಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಭಾಗಿಯಾದ 8 ಪೊಲೀಸ್ ಅಧಿಕಾರಿಗಳ ಪೈಕಿ ಮೂವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದು, ಐವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿ ಆದೇಶ ಹೊರಡಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾ. ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಾದ ಪೊಲೀಸ್ ಅಧಿಕಾರಿ ಕೌಡಿಯಾ ಆರ್‌ಬಿ ಸರೋಜ್, ಹೆಡ್ ಕಾನ್ಸ್‌ಟೇಬಲ್ ರಾಮ್ ನಾಯಕ್ ಮತ್ತು ಕಾನ್ಸ್‌ಟೇಬಲ್ ರಾಮ್ ಕರನ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಉಳಿದಂತೆ ಪ್ರಕರಣದ ಇತರೆ ಆರೋಪಿಗಳೆಂದು ಗುರ್ತಿಸಲಾದ ಕಮಾಂಡೋ ರಮಾಕಾಂತ್ ದೀಕ್ಷಿತ್, ಎಸ್‌ಐ ನಸೀಮ್ ಅಹ್ಮದ್, ಮಂಗಳ್ ಸಿಂಗ್, ಪರ್ವೇಜ್ ಹುಸ್ಸೇನ್ ಮತ್ತು ರಾಜೇಂದ್ರ ಪ್ರಸಾದ್ ಸಿಂಗ್ ಸೇರಿದಂತೆ 13 ಮಂದಿಗೆ ಆಜೀವ ಪರ್ಯಂತ ಜೈಲು ಶಿಕ್ಷೆ ನೀಡಲಾಗಿದೆ. ಇದೇ ಮಾರ್ಚ್ 29 ರಂದು ಪ್ರಕರಣದಲ್ಲಿ 8 ಆರೋಪಿಗಳ ಕೈವಾಡವನ್ನು ಸ್ಪಷ್ಟಪಡಿಸಿದ್ದ ನ್ಯಾಯಾಲಯ, ಏಪ್ರಿಲ್ 5 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತ್ತು.

1982ರಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಮಾಧೋಪುರದಲ್ಲಿ ನಡೆದ ಈ ನಕಲಿ ಎನ್‌ಕೌಂಟರಿನಲ್ಲಿ ಡಿವೈಎಸ್‌ಪಿ ಕೆ.ಪಿ.ಸಿಂಗ್ ಸೇರಿದಂತೆ ಒಟ್ಟು 13 ಮಂದಿ ಪೊಲೀಸ್ ಅಧಿಕಾರಿಗಳು ದಾರುಣವಾಗಿ ಸಾವನ್ನಪ್ಪಿದ್ದರು. ಪೊಲೀಸ್ ಮೂಲಗಳು ಕೆ.ಪಿ.ಸಿಂಗ್‌ರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ ಎಂದು ದಾಖಲೆ ಸೃಷ್ಟಿಸಿದ್ದರು. ಆದರೆ ಸಿಂಗ್ ಪತ್ನಿ ವಿಭಾ ಸಿಂಗ್ ಅವರು, ತಮ್ಮ ಪತಿಯನ್ನು ಅವರ ಸಹೋದ್ಯೋಗಿಗಳೇ ಕೊಂದು ಹಾಕಿದ್ದಾರೆ ಎಂದು ಆರೋಪಿಸಿ ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅಲ್ಲದೆ ಪ್ರಕರಣದ ಗಂಭೀರತೆಯನ್ನು ಅರಿತಿದ್ದ ನ್ಯಾಯಾಲಯ ಇದಕ್ಕಾಗಿ ಒಂದು ವಿಶೇಷ ಸಿಬಿಐ ನ್ಯಾಯಾಲಯವನ್ನೇ ತೆರೆಯಲು ಆದೇಶಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಎಸ್‌ಐ ಪ್ರೇಮ್ ಕುಮಾರ್ ಸೇರಿದಂತೆ 19 ಪೊಲೀಸ್ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ್ದರು. ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ 19 ಜನರ ಪೈಕಿ 10 ಮಂದಿ ವಿವಿಧ ಕಾರಣದಿಂದಾಗಿ ಮರಣವನ್ನಪ್ಪಿದ್ದಾರೆ. ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಎಸ್‌ಐ ಪ್ರೇಮ್ ಕುಮಾರ್ ಅವರನ್ನು ನಿರ್ದೋಷಿ ಎಂದು ತೀರ್ಮಾನಿಸಿ ಪ್ರಕರಣದಿಂದ ಅವರ ಹೆಸರನ್ನು ಕೈಬಿಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement