ರಾಜಾ ಭಯ್ಯಾಗೆ ಸಿಬಿಐ ನೋಟಿಸ್
ಡಿಎಸ್ಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಾಜಿ ಸಚಿವ ರಾಜಾ ಭಯ್ಯಾ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಲಖನೌ: ಡಿಎಸ್ಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಾಜಿ ಸಚಿವ ರಾಜಾ ಭಯ್ಯಾ ಅವರಿಗೆ ಕೇಂದ್ರೀಯ ಅಪರಾಧ ತನಿಖಾ ದಳ(ಸಿಬಿಐ)ದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಉತ್ತರ ಪ್ರದೇಶದ ಬಲಿಪುರ ಹಳ್ಳಿಯಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ರಾಜಾಭಯ್ಯಾ ಅವರಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. 'ತ್ರಿವಳಿ ಕೊಲೆ ಪ್ರಕರಣದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ತನಿಖೆಯ ಪ್ರಕಾರ ಪ್ರಕರಣದಲ್ಲಿ ರಾಜಾ ಭಯ್ಯಾ ನೇರವಾದ ಪಾತ್ರ ಕಂಡುಬರುತ್ತಿಲ್ಲ. ಆದರೆ ಪ್ರಕರಣದ ಕುರಿತು ರಾಜಾ ಭಯ್ಯಾ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ ಹೀಗಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಮಾರ್ಚ್ 2 ರಂದು ಉತ್ತರಪ್ರದೇಶದ ಬಲಿಪುರದಲ್ಲಿ ನಡೆದ ಧಾರ್ಮಿಕ ಮೆರವಣೆಗೆಯ ವೇಳೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ತ್ರಿವಳಿ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಜಿಯಾ ಉಲ್ ಹಕ್ ಸೇರಿದಂತೆ ನನ್ಹೆ ಯಾದವ್ ಮತ್ತು ಆತನ ಸಹೋದರ ಸುರೇಶ್ ಯಾದವ್ ಎಂಬ ಯುವಕರನ್ನು ದುಷ್ಕರ್ಮಿಗಳು ಕ್ರೂರವಾಗಿ ಹತ್ಯೆಗೈದಿದ್ದರು. ಪ್ರಕರಣ ಮಾಧ್ಯಮಗಳಲ್ಲಿ ಬಹಿರಂಗಗೊಂಡ ನಂತರ ಕೊಲೆಯಲ್ಲಿ ಅಂದು ಸಚಿವರಾಗಿದ್ದ ರಾಜಾಭಯ್ಯಾ ಅವರ ಹಸ್ತಕ್ಷೇಪವಿದೆ ಎಂದು ಜಿಯಾ ಉಲ್ ಹಕ್ ಅವರ ಪತ್ನಿ ಪರ್ವೀನ್ ಅಜಾದ್ ಆರೋಪಿಸಿದ್ದರು.
ಘಟನೆ ನಂತರ ಸಚಿವ ರಾಜಾಭಯ್ಯಾ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಲ್ಲದೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರು.