ಕ್ಯೂಬಾ, ಸಿಪ್ರಸ್ ಸರಣಿಯಿಂದ ವಿಜೇಂದರ್ ಡ್ರಾಪ್
ವಿವಾದದಲ್ಲಿ ಮುಳುಗಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಕ್ಯೂಬಾ ಮತ್ತು ಸಿಪ್ರಸ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಸರಣಿಯಿಂದ ಹೊರಗಿಡಲಾಗಿದೆ.
ನವದೆಹಲಿ: ವಿವಾದದಲ್ಲಿ ಮುಳುಗಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಕ್ಯೂಬಾ ಮತ್ತು ಸಿಪ್ರಸ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಸರಣಿಯಿಂದ ಹೊರಗಿಡಲಾಗಿದೆ.
ನವದೆಹಲಿಯಲ್ಲಿ ಇಂದು ನಡೆದ ಭಾರತೀಯ ಬಾಕ್ಸಿಂಗ್ ಫೆಡರೇಷನ್ ಸಭೆಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ಮುಂಬರುವ ಸಿಪ್ರಸ್ ಮತ್ತು ಕ್ಯೂಬಾ ಬಾಕ್ಸಿಂಗ್ ಸರಣಿಗಳಿಂದ ಕೈ ಬಿಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಬಾಕ್ಸಿಂಗ್ ಫೆಡರೇಷನ್‌ನ ಉಪಾಧ್ಯಕ್ಷ ನಿವಾರಣ್ ಮುಖರ್ಜಿ, 'ಮುಂಬರುವ ಸಿಪ್ರಸ್ ಮತ್ತು ಕ್ಯೂಬಾದಲ್ಲಿ ನಡೆಯುವ ಬಾಕ್ಸಿಂಗ್ ಸರಣಿಯಿಂದ ವಿಜೇಂದರ್ ಸಿಂಗ್ ಅವರನ್ನು ಕೈ ಬಿಡಲಾಗಿದೆ. ವಿಜೇಂದರ್ ಅವರು ಪಟಿಯಾಲದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದ ಕಾರಣ ಅವರನ್ನು ಈ ಸರಣಿಗಳಿಂದ ಕೈ ಬಿಡಲಾಗಿದೆ. ಯಾವುದೇ ಒಂದು ಬಾಕ್ಸಿಂಗ್ ಸರಣಿಯನ್ನು ಆಡಲು ಅಭ್ಯಾಸ ಮತ್ತು ತರಬೇತಿ ತುಂಬಾ ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ವಿಜೇಂದರ್ ಸಿಂಗ್ ಅವರನ್ನು ಸರಣಿಯಿಂದ ಕೈ ಬಿಡಲಾಗಿದೆ' ಎಂದು ಹೇಳಿದರು.
ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷರಾದ ಅಭಿಷೇಕ್ ಮಟೋರಿಯಾ ಅವರು ಮಾತನಾಡಿ, 'ವಿಜೇಂದರ್ ಅವರನ್ನು ತಂಡದಿಂದ ದೂರ ಮಾಡಿಲ್ಲ. ಅವರನ್ನು ಸದ್ಯದ ಸರಣಿಗಳಿಂದ ಮಾತ್ರ ಕೈ ಬಿಡಲಾಗಿದೆ. ವಿಜೇಂದರ್ ಸಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದ ಹೀರೋ. ಸದ್ಯ ವಿವಾದಕ್ಕೆ ಗುರಿಯಾಗಿರುವ ಅವರ ಮನಸ್ಸು ಜರ್ಜರಿತವಾಗಿದೆ. ಅವರಿಗೆ ಕೊಂಚ ಕಾಲಾವಕಾಶ ಬೇಕಾಗಿದೆ'.
'ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ನನ್ನೊಂದಿಗೆ ಮಾತನಾಡುವಾಗ ಅವರು ತಾವು ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ತುಂಬಾ ಆತ್ಮವಿಶ್ವಾಸದಿಂದಲೇ ಹೇಳಿದ್ದಾರೆ. ಅಲ್ಲದೆ ಆರೋಪದಿಂದಾಗಿ ಮುಕ್ತನಾಗಿ ಹೊರಬರುತ್ತೇನೆ ಎಂದು ಹೇಳಿದ್ದಾರೆ. ನಮಗೂ ಅವರು ವಿವಾದಿಂದ ಹೊರಬರುತ್ತಾರೆ ಎಂಬ ವಿಶ್ವಾಸವಿದೆ' ಎಂದು ಹೇಳಿದರು.