ಚಾಂಪಿಯನ್ಸ್ ಟ್ರೋಫಿಯಿಂದ ಸೆಹ್ವಾಗ್ ಔಟ್?
ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಿಂದ ಸ್ಪೋಟಕ ಬ್ಯಾಟ್ಸಮನ್ ವೀರೆಂದ್ರ ಸೆಹ್ವಾಗ್ ಅವರನ್ನು ಭಾರತ ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ಮುಂಬೈ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಿಂದ ಸ್ಪೋಟಕ ಬ್ಯಾಟ್ಸಮನ್ ವೀರೆಂದ್ರ ಸೆಹ್ವಾಗ್ ಅವರನ್ನು ಭಾರತ ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ಮುಂಬರುವ ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತಂಡದ ಆಯ್ಕೆಗೆ ಮುಂದಾಗಿರುವ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ, 30 ಜನರ ಸಂಭವನೀಯರ ಆಯ್ಕೆ ಪಟ್ಟಿಯಿಂದ ಸೆಹ್ವಾಗ್ ಅವರನ್ನು ಕೈ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಸೆಹ್ವಾಗ್, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ವೈಫಲ್ಯ ಅನುಭವಿಸಿದ್ದರು. ಅಲ್ಲದೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರಿಗೆ ದೃಷ್ಟಿ ಕೂಡ ಮಂದವಾಗಿರುವುದು ಕಂಡು ಬಂದಿದ್ದು, ಅವರಲ್ಲಿ ಈ ಹಿಂದಿನ ಚೈತನ್ಯ ಕಾಣುತ್ತಿಲ್ಲ. ಇದೂ ಕೂಡ ಸೆಹ್ವಾಗ್ ಅವರ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ನಡುವೆ ಇತ್ತೀಚೆಗೆ ತಂಡಕ್ಕೆ ಸೇರ್ಪಡೆಯಾಗಿರುವ ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರಾ ಅವರ ಅದ್ಭುತ ಫಾರ್ಮ್ ಸೆಹ್ವಾಗ್ ಅವರಿಗೆ ಮುಳುವಾಗುತ್ತಿದೆ. ಅಲ್ಲದೆ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ವೇಗಿ ಜಹೀರ್ ಖಾನ್ ಅವರಿಗೂ ಸಂಭವನೀಯರ ಪಟ್ಟಿಯಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಯುವ ಪ್ರತಿಭೆಗಳಿಂದ ತುಂಬಿ ತುಳುಕುತ್ತಿರುವ ಟೀಂ ಇಂಡಿಯಾದ ಬಾಗಿಲು ಈ ಹಿರಿಯ ಆಟಗಾರರಿಗೆ ಸದ್ಯದ ಮಟ್ಟಿಗೆ ತೆರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಚಾಂಪಿಯನ್ಸ್ ಟ್ರೋಫಿಯ ಸಂಭವನೀಯರ ಪಟ್ಟಿ ಇಂತಿದೆ:-
ಮಹೇಂದ್ರ ಸಿಂಗ್ ಧೋನಿ, ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಉನ್ಮುಕ್ತ್ ಚಾಂದ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮಾ, ಮನೋಜ್ ತಿವಾರಿ, ಅಜಿಂಕ್ಯಾ ರಹಾನೆ, ಅಂಬಾಟಿ ರಾಯುಡು, ಕೇದರ್ ಜಾದವ್, ವೃದ್ದಿಮಾನ್ ಸಹಾ, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜಾ, ಜಲಜ್ ಸಕ್ಸೇನಾ, ಪರ್ವೇಜ್ ರಸೂಲ್, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ಅಶೋಕ್ ದಿಂಡಾ, ಉಮೇಶ್ ಯಾದವ್, ಮಹಮದ್ ಶಮಿ, ಇರ್ಫಾನ್ ಪಠಾಣ್, ಆರ್. ವಿನಯ್ ಕುಮಾರ್, ಪ್ರವೀಣ್ ಕುಮಾರ್, ಈಶ್ವರ್ ಪಾಂಡೆ, ಸಿದ್ಧಾರ್ಥ್ ಕೌಲ್.