ತ್ರಿಮೂರ್ತಿಗಳ ನೇತೃತ್ವದಲ್ಲಿ 2014ರ ಚುನಾವಣೆ: ಮನೀಶ್ ತಿವಾರಿ
ಮುಂಬರುವ 20014ರ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ತ್ರಿಮೂರ್ತಿಗಳ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ನವದೆಹಲಿ: ಮುಂಬರುವ 20014ರ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ತ್ರಿಮೂರ್ತಿಗಳ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ನವದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪಕ್ಷದ ವಕ್ತಾರ ಮನೀಶ್ ತಿವಾರಿ ಈ ಸುದ್ದಿಯನ್ನು ಬಹಿರಂಗಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತ್ರಿಮೂರ್ತಿಗಳಾದ ಪ್ರಧಾನಿ ಮನಮೋಹನ್ ಸಿಂಗ್, ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮುಂಬರುವ 2014ರ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಮನೀಶ್ ತಿವಾರಿ ಹೇಳಿದ್ದಾರೆ.
'ಪಕ್ಷದಲ್ಲಿ ಈ ಮೂವರು ನಾಯಕರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಳದ 9ವರ್ಷಗಳಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಉತ್ತಮ ಜನಪರ ಆಡಳಿತ ನೀಡುವ ಮೂಲಕ ಉತ್ತಮ ಪ್ರಧಾನಿ ಎಂದು ಹೆಸರುಗಳಿಸಿದ್ದಾರೆ. ಅಧ್ಯಕ್ಷೆ ಸೋನಿಯಾಗಾಂಧಿ ಉತ್ತಮವಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಉಪಾಧ್ಯಕ್ಷರಾದ ರಾಹುಲ್ ಗಾಂಧಿ ತಮ್ಮ ನೂತನ ಆಲೋಚನೆಗಳ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಈ ಮೂವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದರಿಂದ ಪಕ್ಷಕ್ಕೆ ಲಾಭವಿದೆ' ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ದ್ಪಿಕೇಂದ್ರಿತ ಅಧಿಕಾರದ ಕುರಿತು ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ತಿರಸ್ಕಿರಿಸಿರುವ ತಿವಾರಿ, ದಿಗ್ವಿಜಯ್ ಪಕ್ಷದ ಹಿರಿಯ ಮುಖಂಡರು. ಪಕ್ಷದ ಬಗ್ಗೆ ಅವರಿಗೆ ತಮ್ಮದೇ ಆದಂತಂಹ ಕಲ್ಪನೆ ಮತ್ತು ಅಭಿಪ್ರಾಯಗಳಿರುತ್ತವೆ. ಕಾಂಗ್ರೆಸ್ ಪ್ರಜಾಸತ್ತಾತ್ಮಕ ಪಕ್ಷ. ಪಕ್ಷವನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನೋಡಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹಕ್ಕಿದೆ ಎಂದು ತಿವಾರಿ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಮತ್ತು ಯಾರ ಅಧ್ಯಕ್ಷತೆಯಲ್ಲಿ ಚುನಾವಣೆಗೆ ಇಳಿಯಬೇಕು ಎಂಬ ವಿಚಾರದ ಬಗ್ಗೆ ತಲೆಕೊಡಿಸಿಕೊಂಡಿರುವ ಕಾಂಗ್ರೆಸ್‌ಗೆ ತಿವಾರಿ ಅವರ ಈ ಸಲಹೆ ಬಹುಶಃ ಕೆಲಸಕ್ಕೆ ಬರಬಹುದು ಎಂದು ಕಾಣುತ್ತದೆ. ಆದರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಕನಸು ಕಾಣುತ್ತಿರುವ 'ಮೇಡಂ' ಈ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.