ಅಕ್ರಮ ಆಸ್ತಿ ಗಳಿಕೆ: ಜಗನ್ ವಿರುದ್ಧ 5ನೇ ಆರೋಪ ಪಟ್ಟಿ ಸಲ್ಲಿಕೆ
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈ.ಎಸ್.ಜಗನ್ಮೋಹನ್ ರೆಡ್ಡಿ ವಿರುದ್ಧ ಸಿಬಿಐ ಅಧಿಕಾರಿಗಳು 5ನೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈ.ಎಸ್.ಜಗನ್ಮೋಹನ್ ರೆಡ್ಡಿ ವಿರುದ್ಧ ಸಿಬಿಐ ಅಧಿಕಾರಿಗಳು 5ನೇ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಹೈದರಾಬಾದಿನ ನಾಂಪಲ್ಲಿಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಜಗನ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಒಟ್ಟು 62 ಪುಟಗಳ ಆರೋಪ ಪಟ್ಟಿಯಲ್ಲಿ 53 ದಾಖಲೆಗಳನ್ನು ಸೇರಿಸಲಾಗಿದ್ದು, 47 ಹೊಸ ಸಾಕ್ಷ್ಯಾಧಾರಗಳನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ ಆಂಧ್ರ ಪ್ರದೇಶದ ಗೃಹ ಸಚಿವೆ ಸಬೀತಾ ಇಂದ್ರಾ ರೆಡ್ಡಿ ಅವರನ್ನು ನಾಲ್ಕನೇ ಆರೋಪಿಯಾಗಿ, ಐಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಪ್ರಕರಣದ 5ನೇ ಆರೋಪಿಯನ್ನಾಗಿ ದಾಖಲು ಮಾಡಲಾಗಿದೆ.
ಅಂತೆಯೇ ಆಂಧ್ರ ಪ್ರದೇಶದ ಅಬಕಾರಿ ಸಚಿವರಾಗಿರುವ ಮಾಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಮತ್ತು ಐಆರ್ಎಸ್ ಅಧಿಕಾರಿ ಕೆ.ವಿ.ಬ್ರಹ್ಮಾನಂದರೆಡ್ಡಿ ಅವರ ಹೆಸರುಗಳನ್ನೂ ಸಹ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ಜಗನ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗಾಗಿ ಸಿಬಿಐ ಅಧಿಕಾರಿಗಳು ಮನವಿ ಸಲ್ಲಿಸಿದ್ದು, ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.