ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ನಿಧನ
ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಸೋಮವಾರ ನಿಧನರಾದರು.
ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರು ಸೋಮವಾರ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಥ್ಯಾಚರ್ ಅವರು ಇಂದು ಸಂಜೆ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅವರ ವಕ್ತಾರ ಲಾರ್ಡ್ ಬೆಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಾರ್ಶ್ವವಾಯುವಿನಿಂದಾಗಿ ಕಳೆದ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಾರ್ಗರೇಟ್ ಅವರನ್ನು ಇತ್ತೀಚೆಗೆ ಲಂಡನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದರು ಎಂದು ಬೆಲ್ ತಿಳಿಸಿದರು.
ಉಕ್ಕಿನ ಮಹಿಳೆ ಎಂದು ಕರೆಸಿಕೊಳ್ಳುತ್ತಿದ್ದ ಮಾರ್ಗರೇಟ್ ಥ್ಯಾಚರ್, ಬ್ರಿಟನ್ ದೇಶದ ಏಕೈಕ ಮಹಿಳಾ ಪ್ರಧಾನಿಯಾಗಿದ್ದರು. 1979ರಲ್ಲಿ ಬ್ರಿಟನ್ ದೇಶದ ಪ್ರಧಾನಿಯಾದ ಮಾರ್ಗರೇಟ್, 1990 ನವೆಂಬರ್ 28ರಂದು ನಿವೃತ್ತಿಯಾದರು.
1982ರಲ್ಲಿ ಫಾಲ್ಕ್ ಲ್ಯಾಂಡ್ ದ್ವೀಪಕ್ಕಾಗಿ ಅರ್ಜೆಂಟೀನಾ ದೇಶದ ವಿರುದ್ಧ ನಡೆದ ಯುದ್ಧದಲ್ಲಿ ಮಾರ್ಗರೇಟ್ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಅವರನ್ನು ದೇಶಾದ್ಯಂತ ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು. 1983ರಲ್ಲಿ ಯುದ್ಧವನ್ನು ಜಯಿಸುವ ಮೂಲಕ ದ್ವೀಪದ ಮೇಲೆ ಬ್ರಿಟನ್ ತನ್ನ ಅಧಿಕಾರ ಸ್ಥಾಪಿಸಿತ್ತು.
ಮೃತ ಮಾರ್ಗರೇಟ್ ಥ್ಯಾಚರ್ ಅವರು ಮಾರ್ಕ್ ಥ್ಯಾಚರ್ ಮತ್ತು ಕ್ಯಾರಲ್ ಥ್ಯಾಚರ್ ಎಂಬ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮಾರ್ಗರೇಟ್ ಅವರ ಪಾರ್ಥೀವ ಶರೀರವನ್ನು ಲಂಡನ್ನಿನ ಅವರ ಬಂಗಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.