ಮಧ್ಯವರ್ತಿಯಾಗಿದ್ದ ರಾಜೀವ್ ಗಾಂಧಿ: ವಿಕಿಲೀಕ್ಸ್
1970ರಲ್ಲಿ ನಡೆದ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಎಂಬ ಅಂಶವನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ನವದೆಹಲಿ: 1970ರಲ್ಲಿ ನಡೆದ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.
1970ರ ವಿಮಾನ ಖರೀದಿ ಬಗ್ಗೆ ಲೇಖನ ಪ್ರಕಟಿಸಿರುವ ವಿಕಿಲೀಕ್ಸ್, ಭಾರತ ಮತ್ತು ಸ್ವೀಡಿಷ್ ಮೂಲದ ವಿಮಾನ ತಯಾರಿಕಾ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ ರಾಜೀವ್ ಗಾಂಧಿ ಅವರು ಮಧ್ಯವರ್ತಿಯಾಗಿ ಕೆಲಸಮಾಡಿ ಒಪ್ಪಂದವನ್ನು ಮುಗಿಸಿಕೊಟ್ಟಿದ್ದರು ಎಂದು ಬಹಿರಂಗಗೊಳಿಸಿದೆ. ಸ್ವೀಡಿಷ್ ಮೂಲದ ಸಾಬ್ ಸ್ಕ್ಯಾನಿಯಾ ಸಂಸ್ಥೆ ತನ್ನ ಲಘು ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಲು ಯತ್ನಿಸಿತ್ತು ಎಂದು ವಿಕಿಲೀಕ್ಸ್ ತಿಳಿಸಿದೆ.
'ನೆರೆಯ ಪಾಕಿಸ್ತಾನ ದೇಶದೊಂದಿಗಿನ ವೈಮನಸ್ಸು ತಾರಕಕ್ಕೇರಿದ್ದ ದಿನಗಳವು. ಅಂದು ಪ್ರಧಾನಿಯಾಗಿದ್ದ ರಾಜೀವ್ ಅವರ ತಾಯಿ ಇಂದಿರಾಗಾಂಧಿ ಅವರೂ ಕೂಡ ಯುದ್ಧ ವಿಮಾನ ಖರಿದಿಯಲ್ಲಿ ಒಲವು ತೋರಿಸಿದ್ದರು. ಕುಟುಂಬದೊಂದಿಗೆ ಮತ್ತು ಮಿತ್ರ ರಾಷ್ಟ್ರ ಅಮೆರಿಕದೊಂದಿಗೆ ರಾಜೀವ್‌ಗಿದ್ದ ಸಂಪರ್ಕವನ್ನು ಸಮರ್ಥವಾಗಿ ಬಳಸಿಕೊಳ್ಳಲು ಯತ್ನಿಸಿದ ಸಾಬ್ ಸ್ಕ್ಯಾನಿಯಾ ಸಂಸ್ಥೆ, ಒಪ್ಪಂದ ಕುದುರಿಸಲು ರಾಜೀವ್ ಗಾಂಧಿ ಅವರನ್ನೇ ಆಯ್ಕೆಮಾಡಿತು.
ಇದಕ್ಕೂ ಮೊದಲು ಸಾಬ್ ಸ್ಕ್ಯಾನಿಯಾ ಸಂಸ್ಥೆ ಅಂದಿನ ಏರ್‌ಚೀಫ್ ಮಾರ್ಷಲ್ ಆಗಿದ್ದ ಒ.ಪಿ. ಮೆಹ್ರಾ ಅವರ ಅಳಿಯನನ್ನು ಮಧ್ಯವರ್ತಿಯಾಗಿ ಆಯ್ಕೆ ಮಾಡಿತ್ತು. ಆದರೆ ಸಂಸ್ಥೆಯ ಅಧಿಕಾರಿಯೊಬ್ಬರು, ಸರ್ಕಾರದಲ್ಲಿ ರಾಜೀವ್ ಗಾಂಧಿ ಅವರಿಗಿದ್ದ ಸಂಪರ್ಕಗಳ ಕುರಿತು ವಿವರಿಸಿದ್ದರು. ರಾಜೀವ್ ಪೈಲಟ್ ತರಬೇತಿ ಪಡೆದಿರುವ ವಿಷಯ ತಿಳಿದ ಸಾಬ್ ಸ್ಕ್ಯಾನಿಯಾ ಸಂಸ್ಥೆ ತನ್ನ ನಿರ್ಣಯವನ್ನು ಬದಲಿಸಿ ಒಪ್ಪಂದ ಕುದುರಿಸಲು ರಾಜೀವ್ ಗಾಂಧಿ ಅವರೇ ಸೂಕ್ತ ವ್ಯಕ್ತಿ ಎಂದು ಭಾವಿಸಿತು. ಕೊನೆಗೆ ಒಪ್ಪಂದ ಕುದುರಿಸಲು ರಾಜೀವ್ ಅವರನ್ನೇ ಸಂಸ್ಥೆ ಆಯ್ಕೆ ಮಾಡಿತು ಎಂದು ವಿಕಿಲೀಕ್ಸ್ ಬಹಿರಂಗ ಪಡಿಸಿದೆ.
ಆರೋಪ ತಳ್ಳಿಹಾಕಿದ ಕಾಂಗ್ರೆಸ್
ವಿಕಿಲೀಕ್ಸ್ ವರದಿಯ ಕುರಿತು ಟೀಕಾಸ್ತ್ರಗಳ ಸುರಿಮಳೆಯಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್, ಆರೋಪವನ್ನು ತಳ್ಳಿಹಾಕಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಜನಾರ್ಧನ ದ್ವಿವೇದಿ, ವಿಕಿಲೀಕ್ಸ್ ಆರೋಪ ಶುದ್ಧ ಸುಳ್ಳು. ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ರಾಜೀವ್ ಗಾಂಧಿ ಇಂತಹ ಯಾವುದೇ ಒಪ್ಪಂದಗಳ ಮಧ್ಯಸ್ಥಿಕೆ ವಹಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ವಿಕಿಲೀಕ್ಸ್ ಬಹಿರಂಗಪಡಿಸಿರುವ ಈ ನೂತನ ಲೇಖನವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಪ್ರತಿಪಕ್ಷಗಳು, ಆಡಳಿತಾರೂಡ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿವೆ. ವಿರೋಧ ಪಕ್ಷ ಬಿಜೆಪಿ, ಅಕ್ರಮಗಳ ಕೂಪವಾಗಿರುವ ಯುಪಿಎ ಸರ್ಕಾರವನ್ನು ವಿಸರ್ಜಿಸುವಂತೆ ಆಗ್ರಹಿಸುತ್ತಿದೆ. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ವಿಕಿಲೀಕ್ಸ್ ಬಹಿರಂಗಪಡಿಸಿರುವ ವರದಿ, ಕಾಂಗ್ರೆಸ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.