ಮಹಿಳೆಯರನ್ನು ಕೀಳಾಗಿ ಕಾಣಬೇಡಿ: ಮೋದಿ
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಮಹಿಳೆಯರನ್ನು ಕೀಳಾಗಿ ಕಾಣಬೇಡಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹೇಳಿದರು.
ನವದೆಹಲಿ: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇಂತಹ ಮಹಿಳೆಯರನ್ನು ಕೀಳಾಗಿ ಕಾಣಬೇಡಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಎಫ್ಐಸಿಸಿಐ ಮಹಿಳಾ ಸಂಘದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿರುವ ನರೇಂದ್ರ ಮೋದಿ, 'ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಇಂತಹ ಮಹಿಳೆಯರನ್ನು ಕೀಳಾಗಿ ಕಾಣಬೇಡಿ. ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಅತ್ಯಂತ ಕೆಟ್ಟದಾಗಿದ್ದು, 18ನೇ ಶತಮಾನದ ಸ್ತ್ರೀಯರ ಸ್ಥಾನಮಾನಕ್ಕೂ ಈಗಿನ 21ನೇ ಶತಮಾನದ ಸ್ತ್ರೀಯರ ಸ್ಥಾನಮಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು'.
ಇತ್ತೀಚೆಗೆ ಹೆಚ್ಚಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಮಾತನಾಡಿದ ಮೋದಿ, 'ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕಷ್ಟೇ. ಮಹಿಳೆಯರಿಗೆ ಗೌರವ ನೀಡದ ಹೊರತು ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗುತ್ತದೆ. ಗುಜರಾತ್ನಲ್ಲಿ ಮಹಿಳೆಯರ ಸ್ಥಾನಮಾನ ಉತ್ತಮಗೊಂಡಿದ್ದೇ ತಮ್ಮ ಅಭಿವೃದ್ಧಿ ಮಾದರಿ ಯಶಸ್ವಿಯಾಗಲು ಕಾರಣ. ಹೀಗಾಗಿಯೇ ಗುಜರಾತ್ನಲ್ಲಿ ಮಹಿಳೆಯರ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸುವ ಆಸ್ಥಿಪಾಸ್ಥಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ'.
'ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯಂತ ಉನ್ನತ ಸ್ಥಾನವಿದೆ. ಆದರೆ ನಮ್ಮ ಸಮಾಜದಲ್ಲಿರುವ ಹಲವು ಕೆಟ್ಟ ಸಂಪ್ರದಾಯಗಳು ಮಹಿಳೆಯರನ್ನು ದೌರ್ಜನ್ಯಕ್ಕೆ ದೂಡುತ್ತಿವೆ. 18ನೇ ಶತಮಾನದಲ್ಲಿ ಹುಟ್ಟಿಕೊಂಡ ಹೆಣ್ಣು ಭ್ರೂಣ ಹತ್ಯೆ ಇದೀಗ ದೊಡ್ಡ ಪಿಡುಗಾಗಿ ಮಾರ್ಪಟ್ಟಿದೆ. 21ನೇ ಶತಮಾನದಂತಹ ಆಧುನಿಕಯುಗದಲ್ಲಿಯೂ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಾಶಮಾಡಲು ಸಾಧ್ಯವಾಗುತ್ತಿಲ್ಲ. ಹೆಣ್ಣು ಭ್ರೂಣ ಹತ್ಯೆಗೆ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನ ಕಾರಣಕರ್ತರೇ. ಇದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತಿನಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಹಲವು ಕಠಿಣ ಕಾನೂನುಗಳನ್ನು ಅನುಸರಿಸಿದ್ದರಿಂದಲೇ ಗುಜರಾತ್ನಲ್ಲಿ ಹೆಣ್ಣು ಭ್ರೂಣ ಹತ್ಯೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ'.
'ಸ್ವಾಂತಂತ್ರ್ಯಾ ನಂತರ ಭಾರತ ಆಧುನೀಕರಣಗೊಂಡಿದೆ. ನಾವೂ ಕೂಡ ಆಧುನೀಕತೆಗೆ ನಮ್ಮನ್ನು ಬದಲಾಯಿಸಿಕೊಳ್ಳಬೇಕು. ಆ ಮೂಲಕ ಇಡೀ ವಿಶ್ವಕ್ಕೇ ಮಹಿಳಾ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಮೋದಿ ಹೇಳಿದರು'.