ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹಿಟ್ ಅಂಡ್ ರನ್ ಪ್ರಕರಣ: ಸಂತೋಷ್ ಮಾನೆಗೆ ಗಲ್ಲು

ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಡ್ರೈವರ್ ಸಂತೋಷ್ ಮಾನೆಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

Srinivasa Murthy VN
Updated On : 8 Apr 2013, 4:15 am

ಪುಣೆ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು, ಡ್ರೈವರ್ ಸಂತೋಷ್ ಮಾನೆಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ಕಳೆದ ವರ್ಷ ಸರ್ಕಾರಿ ಬಸ್ ಅನ್ನು ಹೈಜಾಕ್ ಮಾಡಿದ್ದ ಡ್ರೈವರ್ ಸಂತೋಷ್ ಮಾನೆ, ಮನಸೋಇಚ್ಛೆ ಬಸ್ ಚಲಾಯಿಸಿ 9 ಜನರ ಧಾರುಣ ಸಾವಿಗೆ ಕಾರಣನಾಗಿದ್ದ. ಅಲ್ಲದೆ ಸ್ವತಃ ಸಂತೋಷ್ ಮಾನೆಯೇ ಕಳೆದ ವಾರದ ವಿಚಾರಣೆಯಲ್ಲಿ ತನ್ನ ತಪ್ಪೊಪ್ಪಿಕೊಂಡು ಪಶ್ಚಾತ್ಥಾಪಪಟ್ಟಿದ್ದನು. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ಸಂತೋಷ್ ಮಾನೆಯನ್ನು ಅಪರಾಧಿ ಎಂದೂ ಮತ್ತು ಆತನ ತಪ್ಪು ಉದ್ದೇಶ ಪೂರ್ವಕವೆಂದೂ ಅಭಿಪ್ರಾಯ ಪಟ್ಟಿತ್ತು. ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 8ರಂದು ಪ್ರಕಟಿಸುವುದಾಗಿ ತಿಳಿಸಿತ್ತು.

ಅದರಂತೆ ಅಪರಾಧಿ ಸಂತೋಷ್ ಮಾನೆಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಸಂತೋಷ್ ಮಾನೆಗೆ ಗಲ್ಲು ಶಿಕ್ಷೆ ನೀಡಲು ನ್ಯಾಯಾಲಯ ಪರಿಗಣಿಸಿರುವ ಪ್ರಮುಖ ಅಂಶಗಳು ಇಂತಿವೆ.

ಸಂತೋಷ್ ಮಾನೆ ಸ್ವತಃ ಸರ್ಕಾರಿ ಸಂಸ್ಥೆಯ ಚಾಲಕನಾಗಿದ್ದು, ಕಳೆದ 11 ವರ್ಷಗಳಿಂದ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಪರ ವಕೀಲರು ಆತನನ್ನು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದನು ಎನ್ನುವ ವಾದವನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿಲ್ಲ. ಕಾರಣ ಬಸ್ ಹೈಜಾಕ್ ಆಗುವ ದಿನ ಸಂತೋಷ್ ಮಾನೆ ತನ್ನ ಕೆಲಸದ ಅವಧಿಯನ್ನು ಕಡಿಮೆಗೊಳಿಸುವಂತೆ ಡಿಪೋ ಮ್ಯಾನೇಜರ್ ಬಳಿ ಮನವಿ ಮಾಡಿದ್ದನು.

ಆದರೆ ಡ್ರೈವರ್‌ಗಳ ಸಂಖ್ಯೆ ಕಡಿಮೆ ಇದ್ದುದರಿಂದ ಮ್ಯಾನೇಜರ್ ಇದನ್ನು ನಿರಾಕರಿಸಿದ್ದರು. ಇದರಿಂತ ಕುಪಿತಗೊಂಡಿದ್ದ ಮಾನೆ ಮಾರನೆಯ ದಿನ ಡಿಪೋಗೆ ಆಗಮಿಸಿ ಬಸ್ ವೊಂದರ ಡ್ರೈವರ್, ಮ್ಯಾನೇಜರ್ ಕಚೇರಿಗೆ ಹೋಗಿದ್ದಾಗ ಬಸ್ ಅನ್ನು ಹೈಜಾಕ್ ಮಾಡಿದ್ದಾನೆ. ಆತನೇ ಉದ್ದೇಶ ಪೂರ್ವಕವಾಗಿ ಬಸ್ ಅನ್ನು ಹೈಜಾಕ್ ಮಾಡಿರುವುದು ತನಿಖೆಯಿಂದ ಸ್ಪಷ್ಟಗೊಂಡಿದ್ದು, ಹೈಜಾಕ್ ಆದ ಬಸ್ ಅನ್ನು ಪುಣೆಯ ಫುಟ್‌ಪಾತ್‌ಗಳಲ್ಲಿ, ಜನನಿಬಿಡ ರಸ್ತೆಗಳಲ್ಲಿ ಸುಮಾರು 45 ನಿಮಿಷಗಳ ಕಾಲ ಸುಮಾರು 20 ಕಿ.ಮಿ.ಗಳವರೆಗೆ ಮನಸೋಇಚ್ಛೆ ಚಲಾಯಿಸಿದ್ದಾನೆ.

ಈತನ ನಿರ್ಲಕ್ಷ್ಯದ ಡ್ರೈವಿಂಗ್ ಅನ್ನು ಕಂಡ ಟ್ರಾಫಿಕ್ ಪೊಲೀಸರು ಬಸ್‌ನತ್ತ ಗುಂಡು ಹಾರಿಸಿದರೂ ಆತ ಬಸ್ ಅನ್ನು ನಿಲ್ಲಿಸಿಲ್ಲ. ಹರಸಾಹಸ ಪಟ್ಟು ಕಾಲೇಜು ವಿದ್ಯಾರ್ಥಿಯೊಬ್ಬ ಬಸ್ ಅನ್ನು ನಿಲ್ಲಿಸಿದ್ದಾನೆ. ಅಲ್ಲದೆ ಸ್ವತಃ ಆರೋಪಿ ಸಂತೋಷ್ ಮಾನೆಯೇ ತನ್ನ ತಪ್ಪಿಗೆ ಪಶ್ಚಾತ್ಥಾಪ ಪಟ್ಟು, ನ್ಯಾಯಾಲಯದ ಆವರಣದಲ್ಲಿಯೇ ಕಣ್ಣೀರು ಹಾಕಿದ್ದಾನೆ. ಆದರೆ ನ್ಯಾಯಾಲಯ ಮಾತ್ರ ಮಾನೆಯ ತಪ್ಪಿಗೆ ಕ್ಷಮೆಯೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದು, ಸಂತೋಷ್ ಮಾನೆಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ಕಳೆದ ವರ್ಷ ಪುಣೆಯಲ್ಲಿ ನಡೆದಿದ್ದ ಈ ಹಿಟ್ ಅಂಡ್ ರನ್ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಘಟನೆಯಲ್ಲಿ ಸುಮಾರು 9ಮಂದಿ ಧಾರುಣವಾಗಿ ಸಾವಿಗೀಡಾಗಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ನ್ಯಾಯಾಲಯದ ಈ ಮಹತ್ವದ ತೀರ್ಪು ನಿರ್ಲಕ್ಷ್ಯವಾಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement