ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣ: ಪುತ್ರ ನಿತೇಶ್ ಬಂಧನ
ಉದ್ಯಮಿ ಮತ್ತು ಬಿಎಸ್ಪಿ ಮುಖಂಡ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು..
ನವದೆಹಲಿ: ಉದ್ಯಮಿ ಮತ್ತು ಬಿಎಸ್ಪಿ ಮುಖಂಡ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ದೀಪಕ್ ಕಿರಿಯ ಪುತ್ರ ನಿತೇಶ್ ಭಾರದ್ವಾಜ್ ಅವರನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣ ಸಂಬಂಧ ನಿನ್ನೆ ರಾತ್ರಿ ದೀಪಕ್ ಅವರ ಕಿರಿಯ ಸೊಸೆ ರಮೇಶ್ ಕುಮಾರಿ ಅವರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು ಇಂದು ಆಕೆಯ ಪತಿ ನಿತೇಶ್ ಭಾರದ್ವಾಜ್ ಅವರನ್ನು ಬಂಧಿಸಿದ್ದಾರೆ.
ನಿತೇಶ್ ಅವರೊಂದಿಗೆ ಆತನ ಸ್ನೇಹಿತ ಮತ್ತು ವಕೀಲ ಕೂಡ ಆಗಿರುವ ಬಲ್ಜೀತ್ ಸೆಹ್ರಾವತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಈ ಹೈ ಪ್ರೊಫೈಲ್ ಹತ್ಯೆಗೆ ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಇದಕ್ಕಾಗಿ ದೀಪಕ್ ಅವರ ಹಿರಿಯ ಪುತ್ರ ಹಿತೇಶ್ ಭಾರದ್ವಾಜ್ ಅವರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು, ಆತ ನೀಡಿದ ಮಾಹಿತಿಯ ಮೇರೆಗೆ ಇಂದು ನಿತೇಶ್ ಭಾರದ್ವಾಜ್ ಅವರನ್ನು ಬಂಧಿಸಿದ್ದಾರೆ.
ದೀಪಕ್ ಭಾರದ್ವಾಜ್ ಅವರು ಹತ್ಯೆಗೊಳಗಾಗುವುದಕ್ಕೂ ಮುನ್ನ ತಮ್ಮ ಕಿರಿಯ ಪುತ್ರ ನಿತೇಶ್ ಅವರೊಂದಿಗೆ ಆಸ್ತಿ ಹಂಚಿಕೆ ವಿಷಯದಲ್ಲಿ ಜಗಳವಾಡಿದ್ದರು. ಇದೇ ಕೋಪದಿಂದ ಮನೆಬಿಟ್ಟು ಹೋಗಿದ್ದ ನಿತೇಶ್, ತಂದೆ ದೀಪಕ್ ಭಾರದ್ವಾಜ್ ಅವರ ಮೇಲೆ ಸತತ ಮೂರು ಬಾರಿ ಹತ್ಯಾ ಪ್ರಯತ್ನ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
ಸ್ವಾಮಿ ಪ್ರತಿಮಾನಂದ ನಾಪತ್ತೆ
ಉದ್ಯಮಿ ದೀಪಕ್ ಹತ್ಯೆಯಲ್ಲಿ ತಳುಕು ಹಾಕಿಕೊಂಡಿರುವ ಮತ್ತೊಂದು ಪ್ರಮುಖ ಹೆಸರೆಂದರೆ ಸ್ವಾಮಿ ಪ್ರತಿಮಾನಂದ. ದೀಪಕ್ ಅವರ ತೋಟದ ಮನೆಗೆ ನುಗ್ಗಿ ಶೂಟ್ ಮಾಡಿದ್ದ ಇಬ್ಬರು ಶಾರ್ಪ್ ಶೂಟರ್ಗಳನ್ನು ನಿತೇಶ್ ಭಾರದ್ವಾಜ್ ಅವರಿಗೆ ಪರಿಚಯಿಸಿದ್ದೇ ಸ್ವಾಮಿ ಪ್ರತಿಮಾನಂದ ಎಂದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ದೀಪಕ್ರನ್ನು ಹತ್ಯೆ ಮಾಡಲು ಸ್ವಾಮಿ ಪ್ರತಿಮಾನಂದ ಒಟ್ಟು 3 ಕೋಟಿ ರುಪಾಯಿಗಳ ಡೀಲ್ ಕುದುರಿಸಿದ್ದನು ಎಂದು ತಿಳಿದು ಬಂದಿದೆ. ಈ 3 ಕೋಟಿ ರುಪಾಯಿಗಳಲ್ಲಿ 1 ಕೋಟಿ ಶಾರ್ಪ್ ಶೂಟರ್ಗಳಿಗೆ ಮತ್ತು ಉಳಿದ 2 ಕೋಟಿ ಪ್ರತಿಮಾನಂದನಿಗೆ ಎಂದು ಡೀಲ್ ಕುದುರಿಸಲಾಗಿತ್ತು. ಅದರಂತೆ ಡೀಲ್ ವಹಿಸಿಕೊಂಡ ಶಾರ್ಪ್ ಶೂಟರ್ಗಳಾದ ಸುನೀಲ್ ಮಾನ್ನ್ ಅಲಿಯಾಸ್ ಸೋನು ಮತ್ತು ಪುರುಷೋತ್ತಮ ರಾಣಾ ಅಲಿಯಾಸ್ ಮೋನು, ದೀಪಕ್ ಭಾರದ್ವಾಜ್ ಅವರನ್ನು ದಕ್ಷಿಣ ದೆಹಲಿಯ ಅವರದೇ ಫಾರ್ಮ್ಹೌಸ್ನಲ್ಲಿ ಶೂಟ್ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣ ಸಂಬಂಧ ಶಾರ್ಪ್ ಶೂಟರ್ಗಳಾದ ಸೋನು ಮತ್ತು ಮೋನು ಅವರನ್ನು ಬಂಧಿಸಿದ್ದಾರೆ. ಅಂತೆಯೇ ಶೂಟರ್ಗಳಿಗೆ ಕಾರ್ ಸಪ್ಲೈ ಮಾಡಿದ್ದ ಕಾರ್ ದಲ್ಲಾಳಿ ರಾಕೇಶ್ ಅಲಿಯಾಸ್ ಭೋಲಾ ಎಂಬಾತ ನಗರ ಬಿಟ್ಟು ಪರಾರಿಯಾಗುವಾಗ ರೈಲ್ವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆದರೆ ಪ್ರಕರಣದ ಮತ್ತೋರ್ವ ಆರೋಪಿಯಾದ ಸ್ವಾಮಿ ಪ್ರತಿಮಾನಂದ ಮಾತ್ರ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ವಾಮಿ ಪ್ರತಿಮಾನಂದ ಕೊಲೆ ಪ್ರಕರಣ ಬಯಲಾಗುತ್ತಿದ್ದಂತೆ ತನ್ನ ಆಶ್ರಮ ತೊರೆದಿದ್ದಾನೆ. ತನ್ನ ವೇಷಭೂಷಣಗಳನ್ನು ಬದಲಿಸಿಕೊಂಡು ಈಶಾನ್ಯ ಭಾರತದ ರಾಜ್ಯಗಳನ್ನು ಸುತ್ತುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಇಡೀ ದೇಶದ ಗಮನ ಸೆಳೆದಿದ್ದ ಈ ಹೈ ಪ್ರೋಫೈಲ್ ಕೊಲೆ ಪ್ರಕರಣ, ಇದೀಗ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದೆ. ಪ್ರತಿಮಾನಂದನ ಬಂಧನವಾದರೆ ಕೊಲೆ ಪ್ರಕರಣದ ಸಂಪೂರ್ಣ ರಹಸ್ಯಗಳು ಹೊರ ಬಯಲಾಗುತ್ತವೆ.