ದೇಶದ್ರೋಹ: ವಿಚಾರಣೆಯನ್ನು ಮುಂದೂಡಿದ ಪಾಕ್ 'ಸುಪ್ರೀಂ'
ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಪಾಕ್ ಸುಪ್ರೀಂ ಕೋರ್ಟ್ ಏಪ್ರಿಲ್ 15ಕ್ಕೆ ಮುಂದೂಡಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ವಿರುದ್ಧದ ದೇಶದ್ರೋಹ ಪ್ರಕರಣದ ವಿಚಾರಣೆಯನ್ನು ಪಾಕ್ ಸುಪ್ರೀಂ ಕೋರ್ಟ್ ಏಪ್ರಿಲ್ 15ಕ್ಕೆ ಮುಂದೂಡಿದೆ.
ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯ ವಿಚಾರಣೆಯಲ್ಲಿ ದೇಶ ತೊರೆಯದಂತೆ ಮುಷರಫ್‌ಗೆ ದಿಗ್ಭಂಧನ ವಿಧಿಸಿದ್ದ ನ್ಯಾಯಾಲಯ, ಇಂದು ವಿಚಾರಣೆಯನ್ನು ಏಪ್ರಿಲ್ 15ರವರೆಗೆ ಮುಂದೂಡಿದೆ. ಅಲ್ಲದೆ ಸಾರ್ವತ್ರಿಕ ಚುನಾವಣೆ ಮುಗಿಯುವರೆಗೂ ವಿಚಾರಣೆಯನ್ನು ಮುಂದೂಡುವಂತೆ ಮುಷರಫ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಏಪ್ರಿಲ್ 15ರೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಮುಷರಫ್ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.
ತಮ್ಮ ಅಧ್ಯಕ್ಷ ಪಟ್ಟವನ್ನು ಉಳಿಸಿಕೊಳ್ಳಲು ಸಂವಿಧಾನವನ್ನು ಗಾಳಿಗೆ ತೂರಿ 2007ರಲ್ಲಿ ಆಂತರಿಕ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದ ಮುಷರಫ್, ಸುಮಾರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌದರಿ ಸೇರಿದಂತೆ ಸುಮಾರು 70 ನ್ಯಾಯಮೂರ್ತಿಗಳನ್ನು ವಜಾಗೊಳಿಸಿದ್ದರು. ಮುಷರಫ್ ಅವರ ಅಂದಿನ ನಿರ್ಧಾರವನ್ನು 1973ರ ಕಾಯ್ದೆ ಪ್ರಕಾರ ದೇಶದ್ರೋಹ ಎಂದು ಪರಿಗಣಿಸಬೇಕೆಂದು ವಕೀಲರೊಬ್ಬರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.
ನಿನ್ನೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ದೇಶ ತೊರೆಯದಂತೆ ಮುಷರಫ್ ಅವರಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಏಪ್ರಿಲ್ 9ರಂದು ನಡೆಯಲಿರುವ ವಿಚಾರಣೆಗೆ ಮುಷರಫ್ ಅವರು ತಮ್ಮ ವಕೀಲರೊಂದಿಗೆ ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ತಿಳಿಸಿತ್ತು.