ನಾನು ರಾಜಕಾರಣಿ ಅಲ್ಲ: ಮೋದಿ
ನಾನು ರಾಜಕಾರಣಿ ಅಲ್ಲ. ರಾಜಕೀಯ ವ್ಯಕ್ತಿಯಷ್ಟೇ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊಲ್ಕತಾ: ನಾನು ರಾಜಕಾರಣಿ ಅಲ್ಲ. ರಾಜಕೀಯ ವ್ಯಕ್ತಿಯಷ್ಟೇ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊಲ್ಕತಾದಲ್ಲಿ ನಡೆದ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿದ ಮೋದಿ, ನಾನು ರಾಜಕಾರಣಿ ಅಲ್ಲ, ನಾನೊಬ್ಬ ರಾಜಕೀಯ ವ್ಯಕ್ತಿಯಷ್ಟೇ ಎಂದು ಮಾರ್ಮಿಕವಾಗಿ ನುಡಿದರು.
ಪ್ರಧಾನಿ ಪಟ್ಟದತ್ತ ಕಣ್ಣು ನೆಟ್ಟಿರುವ ಮೋದಿ, ಸಭೆಯಲ್ಲಿ ಕೇಂದ್ರದ ಯುಪಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 'ಕಾಂಗ್ರೆಸ್ಸೇತರ ಸರ್ಕಾರವಿರುವ ರಾಜ್ಯಗಳ ವಿರುದ್ಧ ಕೇಂದ್ರದ ಯುಪಿಎ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದಕ್ಕೆ ಪಶ್ಚಿಮ ಬಂಗಾಳ ರಾಜ್ಯ ಕೂಡ ಹೊರತಾಗಿಲ್ಲ. ಒಂದು ಕಾಲದಲ್ಲಿ ವಾಣಿಜ್ಯ ಕ್ಷೇತ್ರದ ರಾಜಧಾನಿಯಾಗಿದ್ದ ಕೊಲ್ಕತಾ ನಗರ ತಾರತಮ್ಯಕ್ಕೆ ಒಳಗಾಗಿ ನಲುಗುತ್ತಿದೆ'.
'ಕಳೆದ 32 ವರ್ಷಗಳಿಂದ ಪ.ಬಂಗಾಳ ಅರಾಜಕತೆಯಿಂದ ನರಳುತ್ತಿದೆ. ಇದಕ್ಕೆ ಯುಪಿಎ ಸರ್ಕಾರದ ಮಲತಾಯಿ ಧೋರಣೆಯೇ ಕಾರಣ. ಪ.ಬಂಗಾಳದಲ್ಲಿ ಆಡಳಿತ ನಡೆಸಿದ ಈ ಹಿಂದಿನ ಸರ್ಕಾರಗಳು ತಮ್ಮ ಅಸಮರ್ಥತೆಯಿಂದಾಗಿ ರಾಜ್ಯವನ್ನು ಅನೇಕ ಸಮಸ್ಯೆಗಳತ್ತ ದೂಡಿವೆ. ಒಂದೆಡೆ ಕಾಂಗ್ರೆಸ್‌ನ ಮಲತಾಯಿ ಧೋರಣೆ ಮತ್ತು ಸ್ಥಳೀಯ ಸರ್ಕಾರಗಳ ಅಸಮರ್ಥತೆ ಪ.ಬಂಗಾಳವನ್ನು ಸಮಸ್ಯೆಗಳ ಕೂಪವಾಗಿಸಿವೆ. ಹೀಗಾಗಿ ನಾವು ಇದರ ವಿರುದ್ಧ ಧ್ವನಿ ಎತ್ತಬೇಕು' ಎಂದು ಮೋದಿ ಆಗ್ರಹಿಸಿದರು.
ಮಮತಾ ಕಾರ್ಯವೈಖರಿಗೆ ಮೋದಿ ಸಲಾಂ
ಮೊದಲ ಬಾರಿಗೆ ಸರ್ಕಾರ ರಚಿಸಿರುವ ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ ನರೇಂದ್ರ ಮೋದಿ, 'ಬಹಳ ಕಷ್ಟಪಟ್ಟು ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿರುವ ಮಮತಾ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ. ಅವರ ಕಾರ್ಯದಕ್ಷತೆ ಮತ್ತು ಯೋಜನೆಗಳು ಪ್ರಜೆಗಳ ಕನಸನ್ನು ನನಸು ಮಾಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.