ಸುಡಾನ್: 5 ಭಾರತೀಯ ಯೋಧರ ಸಾವು
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 5 ಭಾರತೀಯ ಯೋಧರು ದಕ್ಷಿಣ ಸುಡಾನ್‌ನಲ್ಲಿ ಸಾವನ್ನಪ್ಪಿದ್ದಾರೆ.
ನವದೆಹಲಿ: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 5 ಭಾರತೀಯ ಯೋಧರು ದಕ್ಷಿಣ ಸುಡಾನ್‌ನಲ್ಲಿ ಸಾವನ್ನಪ್ಪಿದ್ದಾರೆ.
ಪ್ರತ್ಯೇಕತಾವಾದಿಗಳ ದಾಳಿಗೆ ಐದು ಭಾರತೀಯ ಯೋಧರು ಹತರಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಸುಮಾರು ಒಂದು ದಶಕದಿಂದ 'ಡೇವಿಡ್ ಯೂ ಯೂ'ವಿನ ನೇತೃತ್ವದ ಪ್ರತ್ಯೇಕತಾವಾದಿಗಳ ಕಪಿಮುಷ್ಠಿಯಲ್ಲಿದ್ದ ದಕ್ಷಿಣ ಸುಡಾನ್ ಪ್ರಾಂತ್ಯವನ್ನು, ವಿಶ್ವಸಂಸ್ಥೆಯ ನೆರವಿನಿಂದ 2011ರಲ್ಲಿ ಸ್ವಾಂತಂತ್ರ್ಯಗೊಳಿಸಲಾಗಿತ್ತು.
ಅಂದಿನಿಂದ ತಮ್ಮ ಪ್ರಾಬಲ್ಯಕ್ಕಾಗಿ ಹೊರಾಡುತ್ತಿರುವ ಪ್ರತ್ಯೇಕತಾವಾದಿಗಳು ಜೋಂಗ್ಲಿ, ಪಿಬರ್ ಕಾಂಟಿಯಲ್ಲಿ ಬೀಡುಬಿಟ್ಟಿದ್ದರು. ಇವರನ್ನು ತೆರವುಗೊಳಿಸಲು ವಿಶ್ವಸಂಸ್ಥೆ ತನ್ನ ಶಾಂತಿಪಾಲನಾ ಪಡೆಗಳನ್ನು ರವಾನಿಸಿತ್ತು. ಇಂದು ಸಂಯುಕ್ತ ರಾಷ್ಟ್ರಗಳ ಯೋಧರೊಂದಿಗೆ ತೆರಳಿದ್ದ ಬೆಂಗಾವಲು ಪಡೆಯ ಭಾರತೀಯ ಯೋಧರ ಮೇಲೆ ಪ್ರತ್ಯೇಕತಾವಾದಿಗಳು ಜೋಂಗ್ಲಿ ಪ್ರದೇಶದಲ್ಲಿ ದಾಳಿ ಮಾಡಿ, 5 ಭಾರತೀಯ ಯೋಧರನ್ನು ಕೊಂದುಹಾಕಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಭಾರತೀಯ ಯೋಧನಿಗೆ ಗುಂಡೇಟು ತಗುಲಿದ್ದು, ಆತನನ್ನು ಸಮೀಪದ ಸೈನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಯೋಧರ ಪಾರ್ಥೀವ ಶರೀರವನ್ನು ಶೀಘ್ರದಲ್ಲಿಯೇ ಭಾರತಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ. ಸಂಯುಕ್ತ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಂತಿಪಾಲನಾ ಪಡೆಯಲ್ಲಿ ಭಾರತದ ಯೋಧರ ಸಂಖ್ಯೆ, ಅನ್ಯ ರಾಷ್ಟ್ರಗಳ ಯೋಧರ ಸಂಖ್ಯೆಗಿಂತಲೂ ಹೆಚ್ಚಾಗಿದೆ.