ದೀದಿಗೆ ಘೆರಾವ್: ಕೊಲ್ಕತಾದಲ್ಲಿ ಘರ್ಷಣೆಗಿಳಿದ ಕಾರ್ಯಕರ್ತರು
ಮಮತಾ ಬ್ಯಾನರ್ಜಿಗೆ ಘೆರಾವ್ ಹಾಕಿದ್ದನ್ನು ಖಂಡಿಸಿ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನವದೆಹಲಿಯಲ್ಲಿ ಘೆರಾವ್ ಹಾಕಿದ್ದನ್ನು ಖಂಡಿಸಿ ಬುಧವಾರ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಎಸ್ಎಫ್ಐ ಸಂಘಟನೆ ಮತ್ತು ಸಿಪಿಐ(ಎಂ) ಕಾರ್ಯಕರ್ತರು ಮಮತಾ ಬ್ಯಾನರ್ಜಿ ಅವರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ, ಇಂದು ಕೋಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರು ಕೋಲ್ಕತಾದ ಪ್ರೆಸೆಡೆನ್ಸಿ ಕಾಲೇಜು ಆವರಣದಲ್ಲಿ ಸೇರಿದ್ದು, ಪ್ರತಿಭಟನೆ ಈಗ ಘರ್ಷಣೆಗಿಳಿದಿದೆ.
ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರನ್ನು ಮತ್ತು ನಾಯಕರನ್ನು ಈ ಕೂಡಲೇ ಬಂಧಿಸಬೇಕು ಎಂದು ಟಿಎಂಸಿ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಟಿಎಂಸಿಯ ನೂರಾರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳ ನಿಮಿತ್ತ ಮೂರು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು, ನಿನ್ನೆ ಸಂಜೆ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಲು ಯೋಜನಾ ಭವನಕ್ಕೆ ಆಗಮಿಸಿದ್ದರು. ಆಗ ಸಿಪಿಐ(ಎಂ) ಮತ್ತು ಎಸ್ಎಫ್ಐ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿ, ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ವಿದ್ಯಾರ್ಥಿ ಮುಖಂಡ ಸುದೀಪ್ತ್ ಗುಪ್ತಾ ಅವರ ಕೊಲೆಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದಾಗಿ ಮಮತಾ ಬ್ಯಾನರ್ಜಿ ಅವರು ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡಿದ್ದರು. ಆದರೆ ಹಣಕಾಸು ಸಚಿವ ಅಮಿತ್ ಮಿಶ್ರಾ ಅವರು ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದು, ಅವರನ್ನು ಕಾರ್ಯಕರ್ತರು ಎಳೆದಾಡಿದ್ದರು. ಘಟನೆಯ ನಂತರ ಮಾಧ್ಯಮಗಳಿಗೆ ವಿಚಾರ ತಿಳಿಸಿದ ಮಮತಾ ಬ್ಯಾನರ್ಜಿ ಅವರು, 'ತಮ್ಮ ಮೇಲಿನ ದಾಳಿಗೆ ಸಿಪಿಐ(ಎಂ) ಮುಖಂಡರೇ ಕಾರಣ ಎನ್ನುವ ಧಾಟಿಯಲ್ಲಿ ಮಾತನಾಡಿದ್ದರು. ಅಲ್ಲದೆ ದೆಹಲಿ ನಿಜವಾಗಿಯೂ ಸುರಕ್ಷಿತವಲ್ಲ ಎಂದು ಮಮತಾ ಹೇಳಿದರು.
ಮಮತಾ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಇತ್ತ ಕೊಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಕೊಲ್ಕತಾ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.