ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಲಕನಿಗೆ ಕರೆಂಟ್ ನೀಡಿ ಹಿಂಸೆ: ಪೊಲೀಸರಿಗೆ ನೋಟಿಸ್

ಲಖನೌ ಪೊಲೀಸರು 5 ವರ್ಷದ ಬಾಲಕನಿಗೆ ವಿದ್ಯುತ್ ಶಾಕ್ ನೀಡುವ ಮೂಲಕ ಮಾನವ ಹಕ್ಕು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Srinivasa Murthy VN
Updated On : 10 Apr 2013, 7:45 am

ಲಖನೌ: ಲಖನೌ ಪೊಲೀಸರು 5 ವರ್ಷದ ಬಾಲಕನಿಗೆ ವಿದ್ಯುತ್ ಶಾಕ್ ನೀಡುವ ಮೂಲಕ ಮಾನವ ಹಕ್ಕು ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 5 ವರ್ಷದ ಬಾಲಕನನ್ನು ವಶಕ್ಕೆ ಪಡೆದಿದ್ದ ಲಖನೌ ಪೊಲೀಸರು, ವಿಚಾರಣೆ ವೇಳೆ ಆತನಿಗೆ ವಿದ್ಯುತ್ ಶಾಕ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಾಲಕನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪ್ರಕರಣ ಮಾಧ್ಯಮಗಳ ಗಮನಕ್ಕೆ ಬಂದಿದೆ. ಲಖನೌ ಪೊಲೀಸರ ಕ್ರೌರ್ಯವನ್ನು ಕಂಡ ನ್ಯಾಯಾಧೀಶರು ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 'ಪುಟ್ಟ ಬಾಲಕನ ಮೇಲೆ ನಿಮ್ಮ ಕ್ರೌರ್ಯ ಮೆರೆಯಲು ನಾಚಿಕೆಯಾಗುವುದಿಲ್ಲವೇ ಎಂದು ಪೊಲೀಸರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಆದರೆ ಇದಕ್ಕೆ ಉತ್ತರಿಸಿದ ಪೊಲೀಸರು, ಬಾಲಕನನ್ನು ನಮಗೆ ಒಪ್ಪಿಸುವ ಮುನ್ನವೇ ಜನರು ಆತನನ್ನು ತೀವ್ರವಾಗಿ ಥಳಿಸಿದ್ದರು ಎಂದು ನ್ಯಾಯಾಧೀಶರ ಬಳಿ ಹೇಳಿಕೆ ನೀಡಿದ್ದಾರೆ.

ಈ ನಡುವೆ ವಿಷಯ ತಿಳಿದುಕೊಂಡ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಪ್ರಕರಣ ಕುರಿತು ಸ್ಪಷ್ಟನೆ ನೀಡುವಂತೆ ಲಖನೌ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 'ಒಂದನೇ ತರಗತಿಯಲ್ಲಿ ಓದುತ್ತಿರುವ 5 ವರ್ಷದ ಪುಟ್ಟ ಬಾಲಕನನ್ನು ಬಂಧಿಸುವ ಮುನ್ನ ಆಯೋಗದ ಗಮನಕ್ಕೆ ತರಲಿಲ್ಲವೇಕೆ' ಎಂದು ಮಾನವ ಹಕ್ಕು ಆಯೋಗ ಪೊಲೀಸರನ್ನು ಪ್ರಶ್ನಿಸಿದೆ. ಅಲ್ಲದೆ ಬಾಲಕನಿಗೆ ಥಳಿಸಿದ್ದ ಕುರಿತು ಮತ್ತು ವಿದ್ಯುತ್ ಶಾಕ್ ನೀಡಿದ ಬಗೆಗೆ ಸ್ಪಷ್ಟನೆ ನೀಡಿ ಎಂದು ಕೇಳಿದೆ.

ಪ್ರಕರಣದ ವಿಚಾರಣೆ ನಡೆಸಿರುವ ಬಾಲಪರಾಧಿಗಳ ನ್ಯಾಯಾಲಯ, ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಫೆಬ್ರವರಿ 2 ರಂದು ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಿದ್ದ ಲಖನೌ ಪೊಲೀಸರು, ಬಾಲಕನಿಗೆ ಚಿತ್ರಹಿಂಸೆ ನೀಡಿದ್ದರ ಕುರಿತು ಸ್ಥಳೀಯ ಮಾಧ್ಯಮಗಳು ನಿರಂತರ ವರದಿ ಪ್ರಸಾರ ಮಾಡಿದ್ದವು.

'ಕೈಲಾಗದವರು ಮೈ ಪರಚಿಕೊಂಡರಂತೆ' ಎನ್ನುವ ಗಾದೆ ಮಾತು ಲಖನೌ ಪೊಲೀಸರಿಗೆ ಅಕ್ಷರಶಃ ಒಪ್ಪುತ್ತದೆ. ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಕೊಳ್ಳೆ ಹೊಡೆಯುತ್ತಿರುವ 'ಮಹಾಮೇಧಾವಿ'ಗಳನ್ನು, ರೌಡಿಗಳನ್ನು, ಗೂಂಡಾ ರಾಜಕಾರಣಿಗಳನ್ನು ಮತ್ತು ಕಳ್ಳರನ್ನು ಹಿಡಿಯಲಾಗದೇ ಆ ಎಲ್ಲಾ ಒತ್ತಡಗಳನ್ನು ಮತ್ತು ಕೋಪವನ್ನು ಆ ಪುಟ್ಟ ಕಂದಮ್ಮನ ಮೇಲೆ ತೀರಿಸಿಕೊಂಡಿರುವುದು ನಿಜಕ್ಕೂ ಖಂಡನೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement