ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗಂಡನಿಂದಲೇ ಪತ್ನಿಯ ಮೇಲೆ ಗ್ಯಾಂಗ್ ರೇಪ್‌

ರಾಜಧಾನಿ ದೆಹಲಿಯಲ್ಲಿ ಸ್ವತಃ ಗಂಡನೇ ಸ್ನೇಹಿತರೊಂದಿಗೆ ಸೇರಿ ತನ್ನ ಪತ್ನಿಯನ್ನು ಅತ್ಯಾಚಾರ ಮಾಡಿದ್ದಾನೆ.

Srinivasa Murthy VN
Updated On : 12 Apr 2013, 4:56 am

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸ್ವತಃ ಗಂಡನೇ ಸ್ನೇಹಿತರೊಂದಿಗೆ ಸೇರಿ ತನ್ನ ಪತ್ನಿಯನ್ನು ಅತ್ಯಾಚಾರ ಮಾಡಿದ್ದಾನೆ.

ದೆಹಲಿ ನಿವಾಸಿಗಳು 'ನಿರ್ಭಯಾ' ಪ್ರಕರಣವನ್ನು ಮರೆಯುವ ಮುನ್ನವೇ ಒಂದರ ಹಿಂದೊಂದರಂತೆ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಈ ಬಾರಿ ಸ್ವತಃ ಗಂಡನೇ ಆತನ ನಾಲ್ವರು ಸ್ನೇಹಿತರೊಂದಿಗೆ ಸೇರಿ ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿರುವುದು ಪೊಲೀಸರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಕಳೆದ ಬುಧವಾರ ರಾತ್ರಿ ಈ ಘಟನೆ ಜರುಗಿದ್ದು, ಮಾಧ್ಯಮಗಳಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಿನ್ನೆ ರೋಹ್ತಕ್ ಜಿಲ್ಲೆಯ ಬಲಾಬನ್ ಗ್ರಾಮದ ಪೊಲೀಸರ ಬಳಿ ದೂರು ದಾಖಲಾಗಿದೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ತನ್ನ ತವರಿಗೆ ವಾಪಸಾಗಲು ಮುಂದಾಗಿದ್ದಳು. ಆದರೆ ಇದಕ್ಕೊಪ್ಪದ ಆಕೆಯ ಪತಿ ಮಹಾಶಯ, ಜಗಳವನ್ನು ಬಗೆಹರಿಸಲು ಆತನ ಇಬ್ಬರು ಸ್ನೇಹಿತರಾದ ಭರಣ್ ಗ್ರಾಮದ ನಿವಾಸಿ ಸುಮಿತ್ ಮತ್ತು ಬಲಾಬನ್ ಗ್ರಾಮದ ಮತ್ತೋರ್ವ ಸ್ನೇಹಿತ ಕಲಾ ಎಂಬುವವರನ್ನು ಕರೆದಿದ್ದಾನೆ. ಪತಿಯ ಸ್ನೇಹಿತರೊಂದಿಗೆ ಚರ್ಚೆ ನಡೆಸಿದ ಆ ಮಹಿಳೆ, ಅದಕ್ಕೂ ಸಮಾಧಾನಗೊಳ್ಳದೇ ಆಕೆಯ ಮನೆಗೆ ಹೋಗಲು ಮುಂದಾಗಿದ್ದಾಳೆ.

ನಡೆದುಕೊಂಡು ಮನೆಯತ್ತ ಸಾಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಪತಿಯ ಆ ಇಬ್ಬರು ಸ್ನೇಹಿತರು ಬೈಕಿನಲ್ಲಿ ತಾವೇ ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನು ಕರೆದುಕೊಂಡು ಮನೆಗೆ ಬಂದಿದ್ದಾರೆ. ಈ ಮಧ್ಯೆ ಮಹಿಳೆಯ ಮನೆ ಮುಂದೆ ಅದಾಗಲೇ ಪತಿ ಸೇರಿದಂತೆ ಮತ್ತೆ ಇಬ್ಬರು ಸ್ನೇಹಿತರು ಪ್ರತ್ಯಕ್ಷರಾಗಿದ್ದರು. ಆಕೆಗೆ ಮತ್ತು ಬರಿಸುವ ಪಾನೀಯವನ್ನು ನೀಡಿದ ಅವರು ಆಕೆ ಪ್ರಜ್ಞಾಶೂನ್ಯಳಾದಾಗ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ರಜ್ಞೆ ಬಂದ ನಂತರ ವಿಷಯ ತಿಳಿದ ಆ ಮಹಿಳೆ ಸಮೀಪದ ರೊಹ್‌ತಕ್ ಜಿಲ್ಲೆಯ ಬಾಲಬನ್ ಗ್ರಾಮದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಕರಣವನ್ನು ದಾಖಲಿಸಿಕೊಂಡ ಬಾಲಬನ್ ಪೊಲೀಸರು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಅತ್ಯಾಚಾರ ನಡೆದಿರುವುದನ್ನು ಧೃಡಪಡಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಐವರನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಾರೆ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಸ್ವತಃ ಗಂಡನೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗಿರುವುದು ದೆಹಲಿಯಲ್ಲಿ ಮಹಿಳೆಯ ಸ್ಥಾನ ಎಷ್ಟು ಶೋಚನೀಯ ಪರಿಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement