ದೆಹಲಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ: 1 ಸಾವು
ದೆಹಲಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ನವದೆಹಲಿ: ದೆಹಲಿಯಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು ಸಾವನ್ನಪ್ಪಿದ್ದು, 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದಲ್ಲಿರುವ ಕೊಳಚೆ ಪ್ರದೇಶ, ಜೆ.ಜೆ.ಕಾಲನಿಯ ಮನೆಗಳಿಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಒಂದು ಹಸುಗೂಸು ಸಾವನ್ನಪ್ಪಿದೆ. ಸುಮಾರು 40ರಿಂದ 50 ಮನೆಗಳಿರುವ ಈ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ಸಮಯ ಕಳೆಯುತ್ತಿದ್ದಂತೆ ಇಡೀ ಜೆ.ಜೆ.ಕಾಲನಿಯನ್ನು ಆವರಿಸಿದೆ. ಘಟನಾ ಪ್ರದೇಶದ ಸುತ್ತಮುತ್ತ ದಟ್ಟವಾದ ಕಪ್ಪುಹೊಗೆ ಆವರಿಸಿದ್ದು, ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಪಡೆಯ ಸಿಬ್ಬಂದಿಗಳು ಸ್ಥಳೀಯರನ್ನು ತೆರವುಗೊಳಿಸುತ್ತಿದ್ದಾರೆ. ಬೆಂಕಿ ಅವಘಡ ಪ್ರದೇಶದ ಸಮೀಪದಲ್ಲಿಯೇ ಬವಾನಾ ಕೈಗಾರಿಕಾ ಪ್ರದೇಶವಿದ್ದು, ಅಲ್ಲಿನ ಕಾರ್ಖಾನೆಗಳ ತ್ಯಾಜ್ಯಗಳನ್ನು ಇಲ್ಲಿ ಸುರಿಯುತ್ತಿದ್ದರು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಸುಮಾರು 20 ಅಗ್ನಿ ಶಾಮಕ ವಾಹನಗಳು ಬೆಂಕಿಯನ್ನು ಆರಿಸುವ ಕಾರ್ಯದಲ್ಲಿ ತೊಡಗಿದೆ. ಅಗ್ನಿ ಅವಘಡಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸ್ಥಳಕ್ಕೆ 2 ಸರ್ಕಾರಿ ಅಂಬುಲೆನ್ಸ್ ಕರೆಸಿಕೊಳ್ಳಲಾಗಿದೆ.