ರಾಜ್ಯ ಚುನಾವಣೆ: 5 ಕ್ಷೇತ್ರದಿಂದ ಎಐಎಡಿಎಂಕೆ ಸ್ಪರ್ಧೆ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರದಿಂದ ಎಐಎಡಿಎಂಕೆ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಚೆನ್ನೈ: ಮೇ 5 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಪಕ್ಷದ ವತಿಯಿಂದ ಐದು ಮಂದಿಗೆ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸಲ್ಲಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ತಮ್ಮ ಎಐಎಡಿಎಂಕೆಯ ಸದಸ್ಯರನ್ನು ನಿಲ್ಲಿಸುವ ಕುರಿತು ಪಕ್ಷದ ಅಧ್ಯಕ್ಷೆ ಜಯಲಲಿತಾ ಅವರು ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.
ಎಐಎಡಿಎಂಕೆಯಿಂದ ಸ್ಪರ್ಧಿಸುತ್ತಿರುವ ಪುಗಳೆಂದಿ ಅವರು ಬೆಂಗಳೂರಿನ ಗಾಂಧಿನಗರದಿಂದ ಸ್ಪರ್ಧಿಸುತ್ತಿದ್ದು, ಪಕ್ಷದ ಸ್ಥಳೀಯ ವಿಭಾಗದ ಮುಖ್ಯಸ್ಥರಾಗಿರುವ ಕೆ.ಮುನಿಸ್ವಾಮಿ ಅವರು ಪ್ರತಿಷ್ಠಿತ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಎಂ.ಅನ್ಬುಕುಮಾರ್ ಕೊಲಾರದ ಕೆಜಿಎಫ್ ಕ್ಷೇತ್ರದಿಂದ, ಆರ್.ರವೀಂದ್ರ ಕುಮಾರ್ ನರಸಿಂಹರಾಜ ಕ್ಷೇತ್ರದಿಂದ ಮತ್ತು ಹನೂರು ಕ್ಷೇತ್ರದಿಂದ ಎಂ.ರವಿ ಸ್ಪರ್ಧಿಸಲಿದ್ದಾರೆ.
ಒಟ್ಟಾರೆ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆ ಪ್ರವೇಶಿಸಲು ಜಯಲಲಿತಾ ಕಸರತ್ತು ನಡೆಸಿದ್ದಾರೆ. ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕದ ಪಾಲಿನ 'ವಿಲನ್' ಆಗಿರುವ ಜಯಲಲಿತಾ ಅವರ ಈ ಐದು ಭಂಟರನ್ನು ಕರ್ನಾಟಕದ ಜನತೆ ಸ್ವೀಕರಿಸುತ್ತಾರೆಯೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.