'ಶ್ರೀಶಾಂತ್ ಕಪಾಳ ಮೋಕ್ಷ' ಪ್ರಕರಣಕ್ಕೆ ಮತ್ತೆ ಜೀವ
2008ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಶ್ರೀಶಾಂತ್ ಕಪಾಳ ಮೋಕ್ಷ ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದೆ.
ನವದೆಹಲಿ: 2008ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಶ್ರೀಶಾಂತ್ ಕಪಾಳ ಮೋಕ್ಷ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
5 ವರ್ಷಗಳ ಹಿಂದಿನ ಕಪಾಳ ಮೋಕ್ಷ ಪ್ರಕರಣಕ್ಕೆ ಕ್ರಿಕೆಟಿಗ ಶ್ರೀಶಾಂತ್ ಹೊಸ ತಿರುವು ನೀಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಮತ್ತು ಕೊಲ್ಕತಾ ತಂಡಗಳ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವಿನ ಮಾತಿನ ಚಕಮಕಿಯನ್ನು ಹಿನ್ನಲೆಯಾಗಿರಿಸಿಕೊಂಡು ಟ್ವೀಟರ್ನಲ್ಲಿ ಟ್ವೀಟ್ ಮಾಡಿರುವ ಕ್ರಿಕೆಟಿಗ ಶ್ರೀಶಾಂತ್, 2008ರಲ್ಲಿ ಹರ್ಭಜನ್ ಸಿಂಗ್ ತಮ್ಮ ಕಪಾಳಕ್ಕೆ ಹೊಡದಿಲ್ಲ ಬದಲಿಗೆ ನನ್ನ ಮೊಣಕೈಗೆ ಹೊಡೆದರು ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
'2008ರ ಐಪಿಎಲ್ ಕಪಾಳಮೋಕ್ಷ ಪ್ರಕರಣ ಸಂಪೂರ್ಣ ಪೂರ್ವ ನಿರ್ಧರಿತವಾದಂತಿತ್ತು. ಅಲ್ಲಿ ಬಲಿಯಾಗಿದ್ದು ಮಾತ್ರ ನಾನು. ಪ್ರಕರಣದ ನಂತರ ಎಲ್ಲ ಮಾಧ್ಯಮಗಳು ನಾನು ಅಳುತ್ತಿರುವುದನ್ನು ತೋರಿಸಿ, ನನ್ನ ಕಪಾಳಕ್ಕೆ ಹರ್ಭಜನ್ ಸಿಂಗ್ ಹೊಡೆದಿದ್ದಾರೆ ಎಂದು ವರದಿ ಬಿತ್ತರಿಸುತ್ತಿದ್ದವು. ಆದರೆ ಸತ್ಯಾಂಶ ಬೇರೆಯೇ ಇದೆ. ಅಂದು ಪಂದ್ಯದ ಸೋಲಿನ ನಂತರ ಹರ್ಭಜನ್ ನನಗೆ ಬೇಕೆಂದೇ ಹೊಡೆದರು. ಆದರೆ ಅವರು ಹೊಡೆದದ್ದು ನನ್ನ ಕಪಾಳಕ್ಕಲ್ಲ. ಬದಲಿಗೆ ನನ್ನ ಮೊಣಕೈಗೆ. ಆದರೆ ಮಾಧ್ಯಮಗಳು ನನ್ನ ಕಪಾಳಕ್ಕೆ ಹೊಡೆದರು ಎಂದು ಬಿತ್ತರಿಸುತ್ತಿದ್ದವು'.
'ಅಂದು ನಾನು ಭಜ್ಜಿಯನ್ನು ಕೆಣಕಿದ್ದಕ್ಕೇ ಅವರು ನನಗೆ ಹೊಡೆದರು ಎನ್ನುವ ಧಾಟಿಯಲ್ಲಿ ವರದಿ ಭಿತ್ತಾರಗೊಂಡಿದ್ದವು. ಅಲ್ಲದೆ ಮೈದಾನದಲ್ಲಿ ಅತ್ತಿದ್ದ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಅಂದು ನಡೆದ ಪಂದ್ಯದ ನಂತರ ಸಾಮಾನ್ಯವಾಗಿ ಎಲ್ಲ ಆಟಗಾರರು ಮಾಡುವ ರೀತಿಯಲ್ಲಿ ನಾನು ಭಜ್ಜಿಯ ಬಳಿ ಬಂದು ಕೈ ಕುಲುಕಿದ್ದೆಯಷ್ಟೇ. ಅಂದು ನನಗೆ ಹೊಡೆಯಬೇಕೆಂದೇ ನಿರ್ಧರಿಸಿದಂತಿದ್ದ ಭಜ್ಜಿ, ಅದನ್ನೇ ಸಮಯವಾಗಿಸಿಕೊಂಡು ಹೊಡೆದರು. ವಿವಾದ ನಡೆದು ಇಷ್ಟು ವರ್ಷಗಳ ಬಳಿಕ ಇದನ್ನು ಬಹಿರಂಗ ಪಡಿಸುವ ಅಗತ್ಯ ಇರಲಿಲ್ಲ. ಜನರು ಈ ಸತ್ಯಾಂಶವನ್ನು ತಿಳಿಯಬೇಕು ಎನ್ನುವ ಕಾರಣದಿಂದಾಗಿ ಇದನ್ನು ಹೇಳುತ್ತಿದ್ದೇನೆ. ನಾವು ಗೌರವಿಸುವ ವ್ಯಕ್ತಿ, ಅಂತಹ ಕೀಳುಮಟ್ಟದ ಕಾರ್ಯಕ್ಕಿಳಿದಾಗ ನಮಗೆ ನೋವಾಗುತ್ತದೆ. ಹಾಗಾಗಿಯೇ ನಾನು ಅಂದು ತೀವ್ರ ನೊಂದಿದ್ದೆ'. ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮಾಧ್ಯಮಗಳು ಅಂದು ರೆಕಾರ್ಡ್ ಆಗಿದ್ದ ವಿಡಿಯೋ ಟೇಪ್ ಅನ್ನು ಮತ್ತೆ ಹಾಕಿ ಸತ್ಯಾಂಶ ಏನೆಂದು ಜನತೆಗೆ ತೋರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರತಿಕ್ರಿಯಿಸಲು ಭಜ್ಜಿ ನಕಾರ
ಶ್ರೀಶಾಂತ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಲು ಹರ್ಭಜನ್ಸಿಂಗ್ ನಿರಾಕರಿಸಿದ್ದಾರೆ. ಐಪಿಎಲ್ 6ರಲ್ಲಿ ಮುಂಬೈ ಪರ ಆಟವಾಡುತ್ತಿರುವ ಭಜ್ಜಿ, ಕಳೆದು ಹೋಗಿರುವ ಘಟನೆಯ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.