ನಾಪತ್ತೆಯಾಗಿದ್ದ ನಟಿ ಅಂಜಲಿ ಹೈದರಾಬಾದಿನಲ್ಲಿ ಪ್ರತ್ಯಕ್ಷ
ಕಳೆದ ಸೋಮವಾರ ಹೈದರಾಬಾದಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನಟಿ ಅಂಜಲಿ ಶುಕ್ರವಾರ ಸಂಜೆ ಪ್ರತ್ಯಕ್ಷರಾಗಿದ್ದಾರೆ.
ಹೈದರಾಬಾದ್: ಕಳೆದ ಸೋಮವಾರ ಹೈದರಾಬಾದಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನಟಿ ಅಂಜಲಿ ಶುಕ್ರವಾರ ಸಂಜೆ ಪ್ರತ್ಯಕ್ಷರಾಗಿದ್ದಾರೆ.
ಭಾರಿ ಸುದ್ದಿ ಮಾಡಿದ್ದ ನಟಿ ಅಂಜಲಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಹೈದರಾಬಾದಿನ ಖಾಸಗಿ ಹೋಟೆಲ್ನಿಂದ ನಾಪತ್ತೆಯಾಗಿದ್ದ ನಟಿ ಅಂಜಲಿ, ನಿನ್ನೆ ರಾತ್ರಿ ಹೈದರಾಬಾದ್ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದಿಡೀರ್ ಪ್ರತ್ಯಕ್ಷರಾಗಿದ್ದಾರೆ.
ತಮ್ಮ ಸಹೋದರ ರವಿಶಂಕರ್ ಮತ್ತು ನಿರ್ಮಾಪಕ ಸುರೇಶ್ ಅವರೊಂದಿಗೆ ಹೈದರಾಬಾದ್ ಪೊಲೀಸ್ ಆಯುಕ್ತ ಸುದೀರ್ ಬಾಬು ಅವರನ್ನು ಭೇಟಿ ಮಾಡಿದ ಅಂಜಲಿ, ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಂಜಲಿ, 'ಸತತ ಚಿತ್ರೀಕರಣದಿಂದ ತಾನು ಬಳಲಿದ್ದು, ವಿಶ್ರಾಂತಿಗಾಗಿ ಮುಂಬೈಗೆ ಹೋಗಿದ್ದೆ' ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಕಳೆದ ಸೋಮವಾರ ದಿಡೀರ್ ನಾಪತ್ತೆಯಾಗಿದ್ದ ಅಂಜಲಿ, ಅಜ್ಞಾತ ಸ್ಥಳದಿಂದ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ತಮ್ಮ ತಾಯಿ ಎಂದು ಹೇಳಿಕೊಳ್ಳುತ್ತಿರುವ ಭಾರತಿ ದೇವಿ ಅವರು ನನ್ನ ಮಲತಾಯಿ. ಅವರಿಂದ ನನಗೆ ಅಪಾಯ ಎದುರಾಗಿದೆ. ಅವರು ನನನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದ್ದರು. ನನಗೆ ಒಲ್ಲದ ಚಿತ್ರಗಳಲ್ಲಿ ನಟಿಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ನನ್ನ ನಿಜವಾದ ತಂದೆ, ತಾಯಿ ವಿವರ ನೀಡಿದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ನಟಿ ಅಂಜಲಿ ಆರೋಪಿಸಿದ್ದರು.
ಅಲ್ಲದೆ ಹೈದರಾಬಾದಿನ ಜುಬಿಲಿಹಿಲ್ಸ್ ಪೊಲೀಸ್ಠಾಣೆಯಲ್ಲಿ ಭಾರತಿ ದೇವಿ ಮತ್ತು ತಮಿಳು ಚಿತ್ರ ನಿರ್ದೇಶಕ ಕಳಾಂಜಿಯಮ್ ವಿರುದ್ಧ ಅಂಜಲಿ ಸಹೋದರ ರವಿಶಂಕರ್ ಅವರು ದೂರು ನೀಡಿದ್ದರು.