ಪ್ರಧಾನಿ ಅಭ್ಯರ್ಥಿ ಆಯ್ಕೆ: ಬಿಜೆಪಿ, ಜೆಡಿ(ಯು) ಬಿಕ್ಕಟ್ಟು ಉಲ್ಬಣ
ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಆಯ್ಕೆಯ ಕುರಿತು ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಆಯ್ಕೆಯ ಕುರಿತು ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
ನವದೆಹಲಿಯಲ್ಲಿ ಇಂದು ಆರಂಭವಾದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಎನ್‌ಡಿಎ ಅಂಗಪಕ್ಷ ಬಿಜೆಪಿ ವಿರುದ್ಧ ಜೆಡಿ(ಯು) ತನ್ನ ಅಸಮಾಧಾನವನ್ನು ಹೊರಹಾಕಿದೆ. ಸಭೆಯಲ್ಲಿ ಮಾತನಾಡಿದ ಜೆಡಿ(ಯು) ಪಕ್ಷದ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಅವರು, ಬಿಜೆಪಿ ತನ್ನ ಮೈತ್ರಿ ಧರ್ಮವನ್ನು ಪಾಲಿಸಿಲ್ಲ. ಬಿಹಾರ, ಕರ್ನಾಟಕ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮೈತ್ರಿ ಧರ್ಮವನ್ನು ಮೀರಿದೆ. ಇದೀಗ ಪ್ರಧಾನಿ ಅಭ್ಯರ್ಥಿಯ ವಿಚಾರದಲ್ಲಿಯೂ ಬಿಜೆಪಿ ನಮಗೆ ಮಾನ್ಯತೆ ನೀಡುತ್ತಿಲ್ಲ ಎಂದು ಹೇಳಿದರು.
ಅಲ್ಲದೆ 'ಪ್ರಧಾನಿ ಆಯ್ಕೆ ಕುರಿತು ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಎನ್‌ಡಿಎಗೆ ಸಮಯ ನೀಡೋಣ' ಎಂದು ತ್ಯಾಗಿ ಹೇಳಿದರು. ಪಕ್ಷದ ಮತ್ತೋರ್ವ ಮುಖಂಡ ಶಿವಾನಂದ್ ತಿವಾರಿ ಅವರು ಮಾತನಾಡಿ, 'ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿಚಾರ ಚರ್ಚೆ ಮಾಡಿಲ್ಲ. ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸಲು ಬಿಜೆಪಿಗೆ ಸಮಯಾವಕಾಶ ನೀಡಿದ್ದೇವೆ. ಅವರು ಯಾವಾಗ ಬೇಕಾದರೂ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಬಹಿರಂಗ ಪಡಿಸಲಿ' ಎಂದು ಹೇಳಿದರು.
ಈ ನಡುವೆ ಉಭಯ ಪಕ್ಷಗಳಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದು, ಈ ಬಗ್ಗೆ ಜೆಡಿ(ಯು) ನಾಯಕರೊಂದಿಗೆ ಚರ್ಚಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.
'ಜೆಡಿ(ಯು) ಪಕ್ಷ ಹೇಳುತ್ತಿರುವ ಅಂಶ ಹಳೆಯದು. ಅದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಮತ್ತು ಜೆಡಿ(ಯು) ನಡುವೆ ಕೆಲ ವಿಚಾರಗಳ ಕುರಿತು ಭಿನ್ನಾಭಿಪ್ರಾಯಗಳಿವೆ. ಪರಸ್ಪರ ಮುಖಾಮುಖಿ ಕುಳಿತು ನಾವು ಅದನ್ನು ಬಗೆಹರಿಸಿಕೊಳ್ಳುತ್ತೇವೆ' ಎಂದು ರಾಜ್‌ನಾಥ್ ಸಿಂಗ್ ಹೇಳಿದರು.
ಒಟ್ಟಾರೆ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಉಂಟಾಗಿರುವ ಬಿಕ್ಕಟ್ಟು, ಕೇಂದ್ರದಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.