ಸಮುದ್ರದಲ್ಲಿ ಲ್ಯಾಂಡ್ ಆದ ಪ್ರಯಾಣಿಕ ವಿಮಾನ
ಇಂಡೋನೇಷ್ಯಾದಲ್ಲಿ ಪ್ರಯಾಣಿಕ ವಿಮಾನವೊಂದು ಸಮುದ್ರದಲ್ಲಿ ಲ್ಯಾಂಡ್ ಆಗಿದೆ.
ಡೆನ್‌ಪಸರ್: ಇಂಡೋನೇಷ್ಯಾದಲ್ಲಿ ಪ್ರಯಾಣಿಕ ವಿಮಾನವೊಂದು ಸಮುದ್ರದಲ್ಲಿ ಲ್ಯಾಂಡ್ ಆಗಿದೆ.
ಇಂಡೋನೇಷ್ಯಾದ ಡೆನ್‌ಪಸರ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ಜರುಗಿದ್ದು, ಪ್ರಮಾದದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಬಜೆಟ್ ಏರ್‌ಲೈನ್ಸ್ ಸಂಸ್ಥೆಯ ಮಾಲೀಕತ್ವದ ಈ ಪ್ರಯಾಣಿಕ ಜೆಟ್ ವಿಮಾನದಲ್ಲಿ ಸುಮಾರು 101 ಮಂದಿ ಪ್ರಯಾಣಿಸುತ್ತಿದ್ದರು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಘಟನೆಯಲ್ಲಿ ಸುಮಾರು 30 ಪ್ರಯಾಣಿಕರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆಯ ಅಧಿಕಾರಿ ಹೆರ್ರಿ ಭಕ್ಟಿ, ವಿಮಾನದಲ್ಲಿ ಸುಮಾರು 101 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. 'ಸಾಮಾನ್ಯವಾಗಿಯೇ ರನ್ ವೇಯಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಪಕ್ಕಕ್ಕೆ ಚಲಿಸಿ ಸಮುದ್ರಕ್ಕೆ ಬಿದ್ದಿತು' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.