'ಕಲ್ಲಿದ್ದಲು' ತನಿಖೆಯಲ್ಲಿ 'ಹಸ್ತ'ಕ್ಷೇಪ ಯತ್ನ: ಸಿಬಿಐ
ಕಲ್ಲಿದ್ದಲು ಹಗರಣದ ತನಿಖೆಯಲ್ಲಿ ಕೇಂದ್ರ ಸರ್ಕಾರ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಿಬಿಐ ಆರೋಪಿಸಿದೆ.
ನವದೆಹಲಿ: ಕಲ್ಲಿದ್ದಲು ಹಗರಣದ ತನಿಖೆಯಲ್ಲಿ ಕೇಂದ್ರ ಸರ್ಕಾರ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಸಿಬಿಐ ಆರೋಪಿಸಿದೆ.
ಕೇಂದ್ರದ ಕಾನೂನು ಸಚಿವ ಅಶ್ವಿನ್ ಕುಮಾರ್ ಮತ್ತು ಪ್ರಧಾನ ಮಂತ್ರಿ ಸಚಿವಾಲಯದ ಕೆಲ ಅಧಿಕಾರಿಗಳು ಕಲ್ಲಿದ್ದಲು ಹಗರಣದಲ್ಲಿ ವಿನಾಕಾರಣ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಸುಪ್ರೀಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಆರೋಪಿಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇತ್ತೀಚೆಗೆ ರಾಷ್ಟ್ರೀಯ ಖಾಸಗಿ ದಿನಪತ್ರಿಕೆಯೊಂದು ಕಲ್ಲಿದ್ದಲು ಹಗರಣದ ತನಿಖೆಯಲ್ಲಿ ಕೇಂದ್ರಸರ್ಕಾರದ ಹಸ್ತಕ್ಷೇಪ ಕುರಿತು ವರದಿ ಪ್ರಕಟಿಸಿತ್ತು. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ತನ್ನ ವರದಿಯಲ್ಲಿ ಕೇಂದ್ರ ಕಾನೂನು ಸಚಿವ ಅಶ್ವಿನ್ ಕುಮಾರ್ ಅವರು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದ್ದು, ಸಿಬಿಐ ತನಿಖಾ ವರದಿಯಲ್ಲಿ ತಿದ್ದುಪಡಿಗಳನ್ನು ಮಾಡಲು ಮುಂದಾಗಿದ್ದರು ಎಂದು ಸಿಬಿಐ ಆರೋಪಿಸಿದೆ. ಹೀಗಾಗಿ ಸಿಬಿಐ ಅಧಿಕಾರಿಗಳು ಅವರಿಗೆ ಸಮನ್ಸ್ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಪ್ರಕಟಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ನಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಇತ್ತ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಪ್ರಹಾರವನ್ನೇ ಮಾಡಿದೆ. ಅಲ್ಲದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು 'ರಾಕ್ಷಸ ಸರ್ಕಾರ'ವೆಂದು ಛೇಡಿಸಿದೆ. ಹಗರಣದಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಕ್ಷಿಸಲು ಕಾಂಗ್ರೆಸ್ ಇಂತಹ ದುರ್ನಡೆತೆಗೆ ಕೈ ಹಾಕಿದೆ ಎಂದು ಬಿಜೆಪಿ ಟೀಕಿಸಿದೆ. ಅಲ್ಲದೆ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಬಿಜೆಪಿ ಆಗ್ರಹಿಸಿದೆ.
'ಇದು ತುಂಬಾ ಗಂಭೀರವಾದ ವಿಚಾರ. ಸಿಬಿಐ ಮೇಲೆ ಒತ್ತಡ ಹಾಕುವ ಮೂಲಕ ಹಗರಣದಿಂದ ಬಚಾವಾಗಲು ಕಾಂಗ್ರೆಸ್ ಹವಣಿಸುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ' ಎಂದು ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಕೇಂದ್ರ ಸಚಿವ ಅಶ್ವಿನ್ ವಿರುದ್ಧ ಗರಂ ಆಗಿದ್ದ ಸೋನಿಯಾ ಮೇಡಂ
ಕಲ್ಲಿದ್ದಲು ಹಗರಣದ ತನಿಖಾ ವರದಿಯನ್ನು ಪ್ರಧಾನ ಮಂತ್ರಿ ಸಚಿವಾಲಯದ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂಬ ವಿಷಯ ತಿಳಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕಾನೂನು ಸಚಿವ ಅಶ್ವಿನ್ ಕುಮಾರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಶನಿವಾರ ಸಂಜೆ ಕೋರ್ ಕಮಿಟಿ ಸಭೆ ಕರೆದ ಸೋನಿಯಾ ಗಾಂಧಿ ಅವರು, ಸಚಿವರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಒಟ್ಟಾರೆ 2ಜಿ ಹಗರಣಕ್ಕಿಂತಲೂ ಭಾರಿ ಸದ್ದು ಮಾಡುತ್ತಿರುವ ಕಲ್ಲಿದ್ದಲು ಹಗರಣ, ಆಡಳಿತಾರೂಢ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಹಗರಣದಿಂದ ಪಾರಾಗಲು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಇದಕ್ಕಾಗಿ ವಾಮಮಾರ್ಗವನ್ನು ಅನುಸರಿಸುತ್ತಿರುವಂತೆ ಭಾಸವಾಗುತ್ತಿದೆ.