ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹಿನ್ನಲೆ ಗಾಯಕ ಪಿಬಿ ಶ್ರೀನಿವಾಸ್ ವಿಧಿವಶ

ಕನ್ನಡದ ಹೆಸರಾಂತ ಗಾಯಕ ಪಿ.ಬಿ ಶ್ರೀನಿವಾಸ್ ಅವರು ಭಾನುವಾರ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

Srinivasa Murthy VN
Updated On : 14 Apr 2013, 6:28 am

ಚೆನ್ನೈ: ಕನ್ನಡದ ಹೆಸರಾಂತ ಗಾಯಕ ಪಿ.ಬಿ ಶ್ರೀನಿವಾಸ್ ಅವರು ಭಾನುವಾರ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಪಿ.ಬಿ.ಶ್ರೀನಿವಾಸ್ ಅವರು ಇಂದು ಚೆನ್ನೈನಲ್ಲಿ ಮೃತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕಳೆದವಾರವಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಚೆನ್ನೈನ ಸಿಐಟಿ ನಗರದಲ್ಲಿರುವ ಸ್ವಗೃಹಕ್ಕೆ ಕರೆತರಲಾಗಿತ್ತು.

ಇಂದು ಮಧ್ಯಾಹ್ನ 1 ಗಂಟೆಗೆ ಚೆನ್ನೈನ ಮನೆಯಲ್ಲಿ ಸ್ನಾನ ಮುಗಿಸಿ, ಹೊರ ಬಂದ ಶ್ರೀನಿವಾಸ್ ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದರು. ನಂತರ ಅವರನ್ನು ಪರೀಕ್ಷಿಸಿದಾಗ ಅವರ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಘಟನೆ ವೇಳೆ ಮನೆಯಲ್ಲಿದ್ದ ಪಿ.ಬಿ ಶ್ರೀನಿವಾಸ್ ಅವರ ಪುತ್ರ ನಂದ ಕಿಶೋರ್ ಅವರು ಮಾತನಾಡಿ, 'ಶ್ರೀನಿವಾಸ್ ಅವರು ಇಂದು ಸ್ನಾನ ಮುಗಿಸಿಕೊಂಡು ಹೊರ ಬಂದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಅವರನ್ನು ಪರೀಕ್ಷಿಸಿದಾಗ ಅವರು ಸಾವನ್ನಪ್ಪಿದ್ದರು. ಅವರ ಪಾರ್ಥೀವ ಶರೀರವನ್ನು ಇಂದು ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟು, ನಾಳೆ ಚೆನ್ನೈನಲ್ಲಿಯೇ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ' ಎಂದು ತಿಳಿಸಿದರು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸೇರಿಂದಂತೆ ಸುಮಾರು 9 ಭಾಷೆಗಳಲ್ಲಿ 3 ಸಾವಿರಕ್ಕೂ ಅಧಿಕ ಹಾಡುಗಳಿಗೆ ತಮ್ಮ ಅದ್ಭುತ ಕಂಠದಾನ ಮಾಡಿದ್ದ ಶ್ರೀನಿವಾಸ್ ಅವರು,  ಸ್ವತಃ ಕವಿಯಾಗಿದ್ದರು. ತಮಿಳು ಮತ್ತು ಮಲೆಯಾಳಂನ ಕೆಲ ಚಿತ್ರಗಳಿಗೆ ಹಾಡುಗಳನ್ನು ಕೂಡ ಬರೆದಿದ್ದಾರೆ. ಅಲ್ಲದೆ ಒಂದು ಕಾಲದಲ್ಲಿ ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಅವರಿಗೆ ಧ್ವನಿಯಾಗಿದ್ದ ಅವರು, ರಾಜ್ ಅಭಿನಯದ 200 ಹಾಡುಗಳನ್ನು ಹಾಡಿದ್ದಾರೆ. ವಿಜಯನಗರದ ವೀರಪುತ್ರ, ಬಂಗಾರದ ಮನುಷ್ಯ, ಭಕ್ತ ಕನಕದಾಸ, ಸ್ವರ್ಣಗೌರಿ, ಸಾಕ್ಷಾತ್ಕಾರ, ಬಬ್ರುವಾಹನ, ಎರಡು ಕನಸು, ಪ್ರೇಮದ ಕಾಣಿಕೆ, ಬೆಟ್ಟದ ಹುಲಿ ಮುಂತಾದ ಚಿತ್ರಗಳಲ್ಲಿ ಹಾಡಿದ್ದರು.

ಮೂಲತಃ ನೆರೆಯ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯವರಾದ ಪಿ.ಬಿ.ಶ್ರೀನಿವಾಸ್ ಅವರು 1930ರಲ್ಲಿ ಸೆಪ್ಟೆಂಬರ್ 22ರಂದು ಜನಿಸಿದರು. ಅವರ ಪೂರ್ಣ ಹೆಸರು ಪ್ರತಿವಾದಿ ಭಯಂಕರ ಶ್ರೀನಿವಾಸ್. 1951ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು 1952ರಲ್ಲಿ ಜೆಮಿನಿ ಸಂಸ್ಥೆ ನಿರ್ಮಾಣದ ಹಿಂದಿ ಚಲನಚಿತ್ರ 'ಮಿ. ಸಂಪತ್‌'ನಲ್ಲಿ ಮೊದಲ ಬಾರಿಗೆ ಹಾಡಿದ್ದರು.. ಕನ್ನಡದಲ್ಲಿ ಡಾ. ರಾಜ್, ವಿಷ್ಣವರ್ಧನ್, ಅಂಬರೀಶ್ ಸೇರಿದಂತೆ ವಿವಿಧ ದಿಗ್ಗಜ ನಟರ ಅಭಿನಯದ ಸುಮಾರು 350 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಡಾ. ರಾಜ್ ಸಾವಿನಿಂದ ನೊಂದಿದ್ದ ಪಿಬಿಎಸ್
ಡಾ. ರಾಜ್ ಕುಮಾರ್ ಅವರ ಬಹುತೇಕ ಚಿತ್ರಗಳಲ್ಲಿ ಹಾಡಿದ್ದ ಶ್ರೀನಿವಾಸ್ ಅವರು ಡಾ. ರಾಜ್ ಕುಮಾರ್ ಅವರು ಸಾವಿನಿಂದ ತೀವ್ರ ನೊಂದಿದ್ದರು. ಡಾ. ರಾಜ್ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈನಿಂದ ಬೆಂಗಳೂರಿಗೆ ದೌಡಾಯಿಸಿದ್ದ ಅವರಿಗೆ ಕೊನೆಗೂ ರಾಜ್ ಅವರ ಪಾರ್ಥೀವ ಶರೀರದ ದರ್ಶನವಾಗಿರಲಿಲ್ಲ. ಇಡೀ ಬೆಂಗಳೂರಿನಾದ್ಯಂತ  ನೀರವ ಮೌನ ಅವರಿಸಿತ್ತು. ಅಲ್ಲದೆ ಬೆಂಗಳೂರಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ರಾಜ್ ಪಾರ್ಥೀವ ಶರೀರರ ಕಂಠೀರವ ಸ್ಟುಡಿಯೋದಲ್ಲಿ ಇರುವ ಕುರಿತು ಮಾಹಿತಿ ಪಡೆದ ಶ್ರೀನಿವಾಸ್ ಅವರು, ಕಂಠೀರವ ಸ್ಟುಡಿಯೋದತ್ತ ಧಾವಿಸಿದ್ದರು. ಅಷ್ಟು ಹೊತ್ತಿಗಾಗಲೇ ಕಂಠೀರವ ಸ್ಟುಡಿಯೋದತ್ತ ಅಭಿಮಾನಿಗಳ ದಂಡು ನೆರೆದಿತ್ತು. ಹೀಗಾಗಿ ಶ್ರೀನಿವಾಸ್ ಅವರು ಪೊಲೀಸರು ನೆರವು ಪಡೆದರಾದರೂ ಅವರಿಗೆ ರಾಜ್ ಪಾರ್ಥೀವ ಶರೀರದ ದರ್ಶನವಾಗಲಿಲ್ಲ. ಇದರಿಂದ ತೀವ್ರ ನೊಂದಿದ್ದ ಅವರು ಅಳುತ್ತಲೇ ಚೆನ್ನೈಗೆ ವಾಪಸಾಗಿದ್ದರು.

ಪಿಬಿಎಸ್ ನಿಧನಕ್ಕೆ ಗಣ್ಯರ ಕಂಬನಿ
ಹಿನ್ನಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಹಠಾತ್ ನಿಧನ ಚಿತ್ರರಂಗದ ಕಣ್ಣೀರಿಗೆ ಕಾರಣವಾಗಿದೆ. ಪಿಬಿಎಸ್ ನಿಧನಕ್ಕೆ ಕಂಬನಿ ಮಿಡಿದಿರುವ ಚಿತ್ರರಂಗದ ಗಣ್ಯರು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement