ಪೆಟ್ರೋಲ್ ಬೆಲೆ ಇಳಿಕೆ; ಡೀಸೆಲ್ ಮತ್ತಷ್ಟು ದುಬಾರಿ
ಪೆಟ್ರೋಲ್ ಬೆಲೆ 1ರು. ಇಳಿಕೆಯಾಗಿದ್ದು, ಡೀಸೆಲ್ ಬೆಲೆ ಮಾತ್ರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ನವದೆಹಲಿ: ಪೆಟ್ರೋಲ್ ಬೆಲೆ 1ರು. ಇಳಿಕೆಯಾಗಿದ್ದು, ಡೀಸೆಲ್ ಬೆಲೆ ಮಾತ್ರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಇಳಿಕೆಯಾಗಿದ್ದು, ಪೆಟ್ರೋಲ್ ಬೇಡಿಕೆಯೂ ಕೂಡ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದು ಈ ಬಗ್ಗೆ ತೈಲ ಕಂಪನಿಗಳೊಂದಿಗೆ ಚರ್ಚಿಸಿರುವ ಕೇಂದ್ರ ಸರ್ಕಾರ, ಪೆಟ್ರೋಲ್ ಬೆಲೆಯಲ್ಲಿ 1ರು. ಕಡಿತಗೊಳಿಸಿದೆ. ಇಂದು ಮಧ್ಯ ರಾತ್ರಿಯಿಂದಲೇ ನೂತನ ದರ ಜಾರಿಯಾಗಲಿದೆ.
ಆದರೆ ಡೀಸೆಲ್ ಬೆಲೆ ಮಾತ್ರ ಮತ್ತಷ್ಟು ದುಬಾರಿಯಾಗಿದ್ದು, ಡೀಸೆಲ್ ದರದಲ್ಲಿ 40 ರಿಂದ 50 ಪೈಸೆಯಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಡೀಸೆಲ್ ದರವನ್ನು ಪ್ರತಿ 2 ತಿಂಗಳಿಗೊಮ್ಮೆ ಪರಿಷ್ಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅದರಂತೆ ಈ ಬಾರಿಯೂ ದರ ಏರಿಕೆ ಮಾಡಲು ನಿರ್ಧರಿಸಿದೆ. ಉಳಿದಂತೆ ಸಬ್ಸಿಡಿ ದರದ ಗೃಹ ಬಳಕೆ ಗ್ಯಾಸ್ ಮತ್ತು ಸೀಮೆಎಣ್ಣೆ ದರದಲ್ಲಿ ಸ್ಥಿರತೆ ಕಂಡುಬಂದಿದ್ದು, ಅವುಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.