ಪ್ರಧಾನಿ ಅಭ್ಯರ್ಥಿ ಬಿಕ್ಕಟ್ಟು: ನಿತೀಶ್ ವಿರುದ್ಧ ಬಿಜೆಪಿ ಸಿಟ್ಟು
ಪ್ರಧಾನಿ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ತಾರಕಕ್ಕೇರಿದ್ದು, ಜೆಡಿ(ಯು) ತಳೆದಿರುವ ನಿಲುವು ಬಿಹಾರ ರಾಜ್ಯ ಬಿಜೆಪಿ ಘಟಕಕ್ಕೆ ಇರುಸು ಮುರುಸು ಉಂಟುಮಾಡಿದೆ.
ನವದೆಹಲಿ: ಬಿಜೆಪಿ ಮತ್ತು ಜೆಡಿ(ಯು) ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ತಾರಕಕ್ಕೇರಿದ್ದು, ಪ್ರಧಾನಿ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿ(ಯು) ತಳೆದಿರುವ ನಿಲುವು ಬಿಹಾರ ರಾಜ್ಯ ಬಿಜೆಪಿ ಘಟಕಕ್ಕೆ ಇರುಸು ಮುರುಸು ಉಂಟುಮಾಡಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನಡವಳಿಕೆ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಬಿಹಾರ ಬಿಜೆಪಿ ಮುಖಂಡ ಸಿ.ಪಿ.ಠಾಕೂರ್ ಅವರ ನೇತೃತ್ವದಲ್ಲಿ, ಬಿಹಾರ ಬಿಜೆಪಿಯ ವಿವಿಧ ಮುಖಂಡರು ನವದೆಹಲಿಗೆ ಆಗಮಿಸಿದ್ದಾರೆ. ಸಿ.ಪಿ.ಠಾಕೂರ್ ಅವರೊಂದಿಗೆ ಗಿರಿರಾಜ್ ಸಿಂಗ್, ಅಶ್ವಿನಿ ಚೌಬೇ ಸೇರಿದಂತೆ ವಿವಿಧ ಮುಖಂಡರು ಆಗಮಿಸಿದ್ದರು. ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್‌ನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಠಾಕೂರ್ ಅವರು ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ.
ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರದ ಬಿಜೆಪಿ ಸಚಿವ ಗಿರಿರಾಜ್ ಸಿಂಗ್, ನರೇಂದ್ರ ಮೋದಿ ಅವರ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಡಿರುವ ಮಾತುಗಳು ನಿಜಕ್ಕೂ ಒಪ್ಪಲಾಗದ್ದು. ಬಿಜೆಪಿ ಪಕ್ಷ ತನ್ನ ನಾಯಕರ ವಿರುದ್ಧದ ಅಪಮಾನವನ್ನು ಎಂದಿಗೂ ಸಹಿಸುವುದಿಲ್ಲ. ಅವರಿಗೆ ಸ್ಪರ್ಧೆ ಅಗತ್ಯವಾಗಿದ್ದರೆ ನಾವು ಅದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಬಿಹಾರದ ಬಿಜೆಪಿಯ ಮತ್ತೋರ್ವ ಮುಖಂಡರಾಗಿರುವ ಅಶ್ವಿನಿ ಚೌಬೇ ಅವರು, ನೀವು ಒಮ್ಮೆ ಆಗಸಕ್ಕೆ ಉಗುಳಿದರೆ, ಆ ಉಗುಳು ತಿರುಗಿ ಮತ್ತೆ ನಿಮ್ಮ ಮೇಲೆಯೇ ಬೀಳುತ್ತದೆ ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ಒಟ್ಟಾರೆ 2014ರ ಚುನಾವಣೆಗೆ ಸಿದ್ಧವಾಗುತ್ತಿರುವ ಬಿಜೆಪಿಗೆ ಈಗ ಎದುರಾಗಿರುವ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು, 17 ವರ್ಷಗಳಷ್ಟು ಹಳೆಯದಾದ ಬಿಜೆಪಿ ಮತ್ತು ಜೆಡಿ(ಯು) ಮೈತ್ರಿಗೆ ಕೊಡಲಿಪೆಟ್ಟು ನೀಡಿದೆ. ಉಭಯ ಪಕ್ಷದ ನಾಯಕರು ಒಬ್ಬರ ಮೇಲೊಬ್ಬರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಗುಜರಾತ್ ನರಮೇಧವನ್ನು ಕಾರಣವಾಗಿಟ್ಟುಕೊಂಡಿರುವ ಜೆಡಿ(ಯು) ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪುತ್ತಿಲ್ಲ. ಆದರೆ ಇತ್ತ ಬಿಜೆಪಿಗೆ ಕಾಂಗ್ರೆಸ್‌ನಂತಹ ದೈತ್ಯ ಪಕ್ಷವನ್ನು ಎದುರಿಸಲು ಓರ್ವ ಸೂಕ್ತ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಅವಶ್ಯಕತೆ ಇದೆ.