ಪ್ರಬಲ ಭೂಕಂಪ: ಇರಾನ್‌ನಲ್ಲಿ 45, ಪಾಕ್‌ನಲ್ಲಿ 10 ಸಾವು
ಪಾಕಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಇರಾನ್ ದೇಶವೊಂದರಲ್ಲಿಯೇ 45 ಜನರು ದುರ್ಮರಣಕ್ಕೀಡಾಗಿದ್ದಾರೆ.
ನವದೆಹಲಿ: ಪಾಕಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಇರಾನ್ ದೇಶವೊಂದರಲ್ಲಿಯೇ 45 ಜನರು ದುರ್ಮರಣಕ್ಕೀಡಾಗಿದ್ದಾರೆ.
ಭೂಕಂಪನದ ತೀವ್ರತೆಗೆ ಇರಾನ್‌ನ ಖುಷ್‌ನಗರದಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ನೂರಾರು ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾ ಭರದಿಂದ ಸಾಗಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಈಗಾಗಲೇ 45 ಶವಗಳನ್ನು ಮತ್ತು 120ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಇನ್ನೂ ಸಾಕಷ್ಟು ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದು ಅವರನ್ನು ಹೊರತೆಗೆಯುವ ಕಾರ್ಯದಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಮಗ್ನರಾಗಿದ್ದಾರೆ.
ಪಾಕಿಸ್ತಾನದಲ್ಲಿಯೂ ಭೂಕಂಪನವಾಗಿದ್ದು, ಇಸ್ಲಾಮಾಬಾದ್ ಸೇರಿದಂತೆ ಹಲವು ನಗರಗಳಲ್ಲಿ 10ಕ್ಕೂ ಹೆಚ್ಚು ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಕಾಲಮಾನ ಸಂಜೆ 4.14ರಲ್ಲಿ ಭೂಕಂಪನವಾಗಿದ್ದು, ಸತತ 28 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇರಾನ್ ದೇಶದ ಆಗ್ನೇಯ ಭಾಗ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.0ರಷ್ಟು ದಾಖಲಾಗಿದೆ. ಪಾಕಿಸ್ತಾನವಷ್ಟೆ ಅಲ್ಲದೆ ದುಬೈನಲ್ಲಿಯೂ ಭೂಕಂಪನವಾಗಿದೆ. ಹಲವು ಕಟ್ಟಡಗಳು ನೆಲಕ್ಕುರುಳಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಭಾರತದಲ್ಲಿಯೂ ಭೂಕಂಪನ ಅನುಭವವಾಗಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿಯೂ ಭೂಮಿ ಕಂಪಿಸಿದೆ. ಕಾಶ್ಮೀರದ ಶ್ರೀನಗರ, ದೆಹಲಿ, ಚಂಡೀಗಡ, ಹರಿಯಾಣ, ಗುಜರಾತ್‌ನ ಅಹಮದಾಬಾದ್, ನೋಯ್ಡಾ, ರಾಜಸ್ತಾನ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸುತ್ತಿದ್ದಂತೆಯೇ ಹೊರಗೆ ಓಡಿ ಬಂದ ಜನರು ಭಯಭೀತಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ಭೂಕಂಪನವಾಗಿದ್ದು ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎತ್ತರದ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿವೆ. ಆದರೆ ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.