ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್ರೇಪ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಮತ್ತೊಂದು ಗ್ಯಾಂಗ್ರೇಪ್ ಪ್ರಕರಣ ಬೆಳಕಿಗೆ ಬಂದಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಮತ್ತೊಂದು ಗ್ಯಾಂಗ್ರೇಪ್ ಪ್ರಕರಣ ಬೆಳಕಿಗೆ ಬಂದಿದೆ.
ನಿನ್ನೆ ರಾತ್ರಿ ನೇಪಾಳ ಮೂಲದ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಅತ್ಯಾಚಾರ ಗೈದು, ದಕ್ಷಿಣ ದೆಹಲಿಯ ನಾನಖ್ಪುರ ಗುರುದ್ವಾರದ ಬಳಿ ಬಿಸಾಡಿ ಹೋಗಿದ್ದಾರೆ. ಬೆಳಗ್ಗೆ ಸುಮಾರು 7.20ರ ಸಮಯದಲ್ಲಿ ವಾಕಿಂಗ್ಗಾಗಿ ಅದೇ ರಸ್ತೆಯಲ್ಲಿ ಬಂದ ವ್ಯಕ್ತಿಯೊಬ್ಬ, ಅರೆ ನಗ್ನಾವಸ್ಥೆಯಲ್ಲಿದ್ದ ಆಕೆಯನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾನೆ.
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆ ಪೊಲೀಸರೊಂದಿಗೆ 'ನೇಪಾಳ, ರೇಪ್, ಕೋಟ್ಲಾ ಮುಬಾರಕ್ಪುರ' ಎಂಬ ಮೂರು ಪದಗಳನ್ನು ಮಾತ್ರ ಕನವರಿಸುತ್ತಿದ್ದಳು ಎಂದು ಪೊಲೀಸರಿಗೆ ಕರೆಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
'ತಾನು ದಕ್ಷಿಣ ದೆಹಲಿಯ ಕೋಟ್ಲಾ ಮುಬಾರಕ್ಪುರದ ನಿವಾಸಿಯಾಗಿದ್ದು, ತನಗೆ ಮದುವೆಯಾಗಿದೆ. ಇಲ್ಲೇ ಸಮೀಪದ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡಿದ್ದೆ. ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದಾಗ ಮೂವರು ದುಷ್ಕರ್ಮಿಗಳು ತನಗೆ ಮತ್ತು ಬರುವ ಔಷಧ ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಗೈದರು' ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರೊಂದಿಗೆ ಹೇಳಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿಕೊಂಡಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಆಕೆಯನ್ನು ಸಮೀಪದ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಕೆಯನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ.