ನ್ಯಾಯಾಧೀಶರ ನೇಮಕಾತಿ: ಮುಷರಫ್ ಬಂಧನ..?
ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರು ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
ಇಸ್ಲಾಮಾಬಾದ್: ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರು ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.
2007ರ ಅವಧಿಯಲ್ಲಿ ನಡೆದ ನ್ಯಾಯಾಧೀಶರ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ್ದ ಇಸ್ಲಾಮಾಬಾದ್ ನ್ಯಾಯಾಲಯ, ಮುಷರಫ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಅವರ ಬಂಧನಕ್ಕೆ ಆದೇಶಿಸಿತ್ತು. ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆಯೇ ಕೋರ್ಟ್ ಹಾಲಿನಲ್ಲಿದ್ದ ಮುಷರಫ್ ಅವರು, ಬಂಧನದಿಂದ ತಪ್ಪಿಸಿಕೊಳ್ಳಲು ದಿಢೀರನೇ ತಮ್ಮ ಕಾರನ್ನು ಹತ್ತಿ ನ್ಯಾಯಾಲಯದಿಂದ ಪರಾರಿಯಾಗಿದ್ದರು.
ಕೆಲ ಕಾಲ ತಲೆತಪ್ಪಿಸಿಕೊಂಡಿದ್ದ ಮುಷರಫ್, ಇಸ್ಲಾಮಾಬಾದಿನ ಹೊರವಲಯದಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಫಾರ್ಮ್ಹೌಸನ್ನು ಸುತ್ತುವರೆದಿದ್ದಾರೆ. ನೂರಾರು ಭದ್ರತಾ ಪಡೆಗಳ ಸಿಬ್ಬಂದಿಗಳು, ಅಶ್ರುವಾಯು ದಳಗಳು, ಮತ್ತು ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಗಳು ಮುಷರಫ್ ಅವರ ಬಂಧನಕ್ಕಾಗಿ ಕಾದುಕುಳಿತಿದ್ದಾರೆ.
ಇದೀಗ ಫಾರ್ಮ್ಹೌಸ್ ಪ್ರವೇಶಿಸಿರುವ ಅಧಿಕಾರಿಗಳು, ಮುಷರಫ್ ಅವರನ್ನು ಬಂಧಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳುತ್ತಿಲ್ಲ. ಈ ನಡುವೆ ಇಸ್ಲಾಮಾಬಾದ್ ನ್ಯಾಯಾಲಯದ ಆದೇಶವನ್ನು ಟೀಕಿಸಿರುವ ಮುಷರಫ್, ಫಾರ್ಮ್ಹೌಸ್ನಿಂದಲೇ ಎಚ್ಚರಿಕೆ ರವಾನಿಸಿದ್ದಾರೆ. 'ತಮ್ಮನ್ನು ಬಂಧಿಸಿದರೆ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ. ದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿ ಅನಗತ್ಯವಾಗಿ ದೇಶದಲ್ಲಿ ಅಸ್ಥಿರತೆ ಉಂಟಾಗುತ್ತದೆ' ಎಂದು ಕಿಡಿಕಾರಿದ್ದಾರೆ.
ಒಟ್ಟಾರೆ 2007ರ ನ್ಯಾಯಾಧೀಶರ ಅಕ್ರಮ ನೇಮಕಾತಿ ಮತ್ತು ಆಂತರಿಕ ತುರ್ತು ಪರಿಸ್ಥಿತಿ ಹೇರಿಕೆ ಪ್ರಕರಣಗಳು ಮುಷರಫ್ ಅವರ ಭವಿಷ್ಯಕ್ಕೆ ಕುತ್ತಾಗಿ ಪರಿಣಮಿಸಿವೆ. ಅಧಿಕಾರ ಉಳಿಸಿಕೊಳ್ಳಲು ಇಡೀ ದೇಶವನ್ನೇ ತುರ್ತುಪರಿಸ್ಥಿತಿ ಎಂಬ ಅಂಧಕಾರದ ಕೂಪಕ್ಕೆ ತಳ್ಳಿದ ಮುಷರಫ್, ತಮ್ಮ ಪಾಪದ ಫಲವನ್ನು ತಾವೇ ಉಣ್ಣುವ ಕಾಲ ಸನ್ನಿಹಿತವಾಗಿದೆ.